ಮರವಂತೆ: ರಕ್ಕಸ ಅಲೆಗಳ ಮಧ್ಯೆ ಮೋಜಿನ ಸೆಲ್ಫಿಯಾಟ: ಮೈಮರೆತವರಿಗೆ ಪಿಎಸ್‍ಐ ಪಾಠ

Spread the love

ಮರವಂತೆ: ರಕ್ಕಸ ಅಲೆಗಳ ಮಧ್ಯೆ ಮೋಜಿನ ಸೆಲ್ಫಿಯಾಟ: ಮೈಮರೆತವರಿಗೆ ಪಿಎಸ್‍ಐ ಪಾಠ

  • ರಭಸದ ಕಡಲಬ್ಬರದ ನಡುವೆಯೂ ಭೀತಿ ಹುಟ್ಟಿಸುವ ಸೆಲ್ಫಿ ಕ್ರೇಝ್
  • ವಿಶ್ವವಿಖ್ಯಾತ ಮರವಂತೆಯ ಕಡಲ ಕಿನಾರೆಗೆ ಬೇಕಿದೆ ಸುರಕ್ಷತಾ ಕ್ರಮ

ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಗಾಳಿ-ಮಳೆಗೆ ನದಿ ಹಾಗೂ ಸಮುದ್ರದ ನೀರಿನ ಮಟ್ಟ ಏರಿಕೆಯಾಗಿದೆ. ಕಡಲು ಪ್ರಕ್ಷುಬ್ದಗೊಂಡು ರಕ್ಕಸ ಅಲೆಗಳು ಮೇಲೇಳುತ್ತಿದ್ದರೂ ಪ್ರವಾಸಿಗರೂ ಮಾತ್ರ ಯಾವುದನ್ನೂ ಲೆಕ್ಕಿಸದೆ ಅಪಾಯಕ್ಕೆ ಆಹ್ವಾನಿಸುವ ಅಲೆಗಳ ನಡುವೆ ಮೋಜಿನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಗುರುವಾರ ಇಲ್ಲಿನ ಮರವಂತೆ ಕಡಲತೀರದಲ್ಲಿ ಕಂಡುಬಂದಿದೆ.

ಇಲ್ಲಿನ ತ್ರಾಸಿ – ಮರವಂತೆ ಚತುಷ್ಪಥ ಹೆದ್ದಾರಿಯುದಕ್ಕೂ ಕಡಲ್ಕೊರೆತ ತಡೆಗಾಗಿ ಬಂಡೆ ಕಲ್ಲುಗಳಿಂದ ನಿರ್ಮಿಸಿದ ತಡೆಗೋಡೆಗೆ ಅಲೆಗಳು ಬಂದು ಅಪ್ಪಳಿಸುತ್ತಿರುವ ದೃಶ್ಯ ಕಣ್ಣಿಗೆ ಮುದ ನೀಡುತ್ತಿದೆ. ಆದರೆ ಪ್ರವಾಸಿಗರು ಭಾರೀ ಗಾತ್ರದ ಅಲೆಗಳು ಅಪ್ಪಳಿಸುವ ಸನಿಹಹೇ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸ್ಥಳೀಯರಿಗೆ ಭೀತಿ ಹುಟ್ಟಿಸುತ್ತಿದೆ.

ಮಹಾಮಾರಿ ಕೊರೋನಾದಿಂದಾಗಿ ಜಾರಿಯಾಗಿದ್ದ ಲಾಕ್‍ಡೌನ್ ತೆರವಾಗಿದ್ದು, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಕಡಲು ಹಾಗೂ ನದಿಯ ಮಧ್ಯೆ ಹಾದು ಹೋಗುವ ವಿಶ್ವವಿಖ್ಯಾತ ಮರವಂತೆ ಕಡಲತೀರವನ್ನು ನೋಡುವುದೇ ಸೊಬಗು. ಹೀಗಾಗಿ ವಿವಿಧ ಜಿಲ್ಲೆ, ರಾಜ್ಯ ವಿದೇಶಗಳಿಂದಲೂ ಈ ಅಪೂರ್ವ ಸ್ಥಳವನ್ನು ನೋಡಲು ಬರುತ್ತಾರೆ. ಆದರೆ ಕಳೆದ ಕೆಲ ದಿನಗಳಿಂದ ಅಲೆಗಳ ಅಬ್ಬರ ಹೆಚ್ಚುತ್ತಿದ್ದು, ಇದರ ಮಧ್ಯೆಯೂ ಪ್ರವಾಸಿಗರು ಅಪಾಯಕಾರಿ ಸ್ಥಳದಲ್ಲಿ ನಿಂತು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಸೆಲ್ಫಿ ತೆಗೆಯುವುದು, ನೀರಿಗಿಳಿದು ವಿಹಾರಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.

ಡೇಂಜರ್ ಸ್ಪಾಟ್‍ನಲ್ಲಿ ಡೇಂಜರ್ ಸೆಲ್ಫಿ!
ಕಡಲ್ಕೊರೆತ ತಡೆಗಾಗಿ ಹಾಕಲಾಗಿದ್ದ ಬೃಹತ್ ಗಾತ್ರದ ಕಲ್ಲು ಬಂಡೆಗಳ ತುದಿಯವರೆಗೆ ಹೋಗಿ ರಕ್ಕಸ ಅಲೆಗಳು ಅಪ್ಪಳಿಸುವ ಸನಿಹದಲ್ಲೇ ಫೋಟೋ ತೆಗೆಯುತ್ತಿದ್ದು, ಅಲೆಗಳಿಗೆ ಬೆನ್ನು ಹಾಕಿ ಅಪಾಯದ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಕಡಲು ಪ್ರಕ್ಷುಬ್ದಗೊಂಡಿದ್ದರೂ ಕಡಲಿಗಿಳಿದು ಅಲೆಗಳ ಜತೆ ಆಟವಾಡುತ್ತಿರುವುದು ಅಪಾಯಕ್ಕೆ ಆಹ್ವಾನಿಸುವಂತಿದೆ. ಇಲ್ಲಿನ ಕಡಲ ತೀರದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಗೃಹ ರಕ್ಷಕದ ದಳದವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಪಾಯಕಾರಿ ಸ್ಥಳದಲ್ಲಿ ನಿಂತವರಿಗೆ ಪಿಎಸ್‍ಐ ಸುರಕ್ಷತೆಯ ಪಾಠ:
ಕಳೆದ ಕೆಲ ದಿನಗಳಿಂದ ಮರವಂತೆ ಕಡಲತೀರಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿದ್ದು, ಪೊಲೀಸ್ ಇಲಾಖೆಯೂ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಗುರುವಾರ ಅಪಾಯಕಾರಿ ಸ್ಥಳದಲ್ಲಿ ಕಡಲಬ್ಬರದ ಸೊಬಗಿಗೆ ಮೈಮರೆತು ನಿಂತು ಮೋಜಿನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರಿಗೆ ಗಂಗೊಳ್ಳಿ ಠಾಣೆಯ ಪಿಎಸ್‍ಐ ನಂಜಾ ನಾಯ್ಕ್ ಸುರಕ್ಷತೆಯ ಪಾಠ ಮಾಡಿದ್ದಾರೆ. ಕರ್ತವ್ಯದ ನಿಮಿತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪಿಎಸ್‍ಐ ಪ್ರವಾಸಿಗರನ್ನು ಕಂಡು ತಮ್ಮ ಜೀಪು ನಿಲ್ಲಿಸಿ ಸೈರನ್ ಹೊಡೆದು ಮೈಕ್‍ನಲ್ಲಿ ದಡಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ದಡಕ್ಕೆ ಬಂದ ಪ್ರವಾಸಿಗರಿಗೆ ಕೆಲಹೊತ್ತು ಬುದ್ದಿಮಾತು ಹೇಳಿ ಅವರು ವಾಪಾಸ್ ಕಳುಹಿಸಿದ್ದಾರೆ.

ಈ ಹಿಂದೆ ವಾರಾಂತ್ಯದಲ್ಲಿ ನಮ್ಮ ಆಪತ್ಭಾಂಧವ 24/7 ಹೆಲ್ಪ್‍ಲೈನ್ ತಂಡದ ಸದಸ್ಯರು ತ್ರಾಸಿ-ಮರವಂತೆ ಸಮುದ್ರತೀರಕ್ಕೆ ಬರುವ ಪ್ರವಾಸಿಗರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆಗಳನ್ನು ಕೊಡುತ್ತಿದ್ದೆವು. ಕಳೆದೊಂದು ವರ್ಷದಿಂದ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ನಮ್ಮ ತಂಡ ಅಲ್ಲಿಗೆ ಹೋಗಿಲ್ಲ. ಇದೀಗ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಅಲ್ಲಿನ ಅಪಾಯಗಳ ಅರಿವಾಗಿದೆ. ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಪೊಲೀಸ್ ಇಲಾಖೆಯೂ ನಮಗೆ ಸಹಕಾರ ನೀಡಿದರೆ ಇನ್ನುಮುಂದೆ ದಿನನಿತ್ಯ ಸಂಜೆ ತೆರಳಿ ಪ್ರವಾಸಿಗರಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಮನದಟ್ಟು ಮಾಡುತ್ತೇವೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಗಂಗೊಳ್ಳಿ

ಪಡುಬಿದ್ರೆಯಿಂದ ಶಿರೂರಿನ ತನಕವೂ ಅನಾಹುತಗಳು ಸಂಭವಿಸದಂತೆ ಅಲ್ಲಲ್ಲಿ ಸಮುದ್ರ ತೀರಗಳಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಪ್ರವಾಸಿಗರ ರಕ್ಷಣೆ ನಮ್ಮ ಮೊದಲ ಆದ್ಯತೆ. ಹೀಗಾಗಿ ತ್ರಾಸಿ-ಮರವಂತೆ ಕಡಲತೀರಕ್ಕೆ ಇಬ್ಬರು ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಸುರಿಯುವ ಮಳೆಯಲ್ಲೂ ರೈನ್ ಕೋಟ್ ಧರಿಸಿ ತಮ್ಮ ಕೆಲಸಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಾರೆ. ಪ್ರತಿನಿತ್ಯವೂ ಇವರ ಉಪಸ್ಥಿತಿಯನ್ನು ಖುದ್ದು ಫೋನ್ ಮೂಲಕ ಖಚಿತಪಡಿಸಕೊಳ್ಳುತ್ತೇನೆ. ತ್ರಾಸಿ-ಮರವಂತೆ ಕಡಲತೀರ ವಿಸ್ತಾರವಾಗಿರುವುದರಿಂದ ಕರ್ತವ್ಯ ಸ್ವಲ್ಪ ತ್ರಾಸದಾಯಕವಾಗುತ್ತಿದೆ ಎನ್ನುವುದು ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕ ಕ್ಲಿಫರ್ಡ್‌ ಲೋಬೊ ಇವರ ಅಭಿಪ್ರಾಯ


Spread the love