
ಮರವಂತೆ: ಸೆಲ್ಫೀ ತೆಗೆಯಲು ಹೋಗಿ ಸಮುದ್ರಪಾಲಾದ ಯುವಕನ ಮೃತದೇಹ ಪತ್ತೆ
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಸೆಲ್ಫೀ ತೆಗೆಯಲು ಹೋಗಿ ನೀರಪಾಲಾಗಿದ್ದ ಗದಗ ಮೂಲದ ಯುವಕನ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವಂಡಿ ಗ್ರಾಮದ 21 ವರ್ಷ ಪ್ರಾಯದ ಪೀರ್ ನದಾಫ್ ಮೃತ ಯುವಕ. ಮೃತ ದೇಹವು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆ ಬಳಿ ಪತ್ತೆಯಾಗಿದೆ.
ಫೀರ್ ಸಾಬ್ ಸುಮಾರು 2 ತಿಂಗಳ ಹಿಂದೆ ಗಾರೆ ಕೆಲಸಕ್ಕಾಗಿ ಕಾಪುವಿಗೆ ಆಗಮಿಸಿದ್ದು, ಮಂಗಳವಾರ ತನ್ನ ಜಿಲ್ಲೆಯ ಪರಿಚಯದ ಗದಗ ನಿವಾಸಿ ಸಿರಾಜ್ ಎಂಬವರು ತಮ್ಮ ಲಾರಿಯಲ್ಲಿ ಮಂಗಳೂರಿಗೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಫೀರ್ ಸಾಬ್ ಹಾಗೂ ಆತನ ಗೆಳೆಯ ಸಿದ್ದಪ್ಪರವರು ತಾವು ಮನೆಗೆ ಹೋಗುವುದಾಗಿ ಹೇಳಿದ್ದು ಸಿರಾಜ್ ರವರ ಲಾರಿಯಲ್ಲಿ ತೆರಳಿದ್ದರು.
ಇದನ್ನೂ ಓದಿ: ಮರವಂತೆ: ಸೆಲ್ಫೀ ತೆಗೆದುಕೊಳ್ಳುತ್ತಿದ್ದ ವೇಳೆ ಕಾಲು ಜಾರಿ ಯುವಕ ಸಮುದ್ರ ಪಾಲು
ದಾರಿಮಧ್ಯೆ ಮರವಂತೆ ಬೀಚ್ ಬಳಿ ಸಿರಾಜ್ ಲಾರಿಯನ್ನು ನಿಲ್ಲಿಸಿದ್ದು ಈ ಸಮಯದಲ್ಲಿ ಬೀಚ್ ನಲ್ಲಿ ಇರುವ ಕಲ್ಲುಗಳ ಮೇಲೆ ನಿಂತು ಸಮುದ್ರಕ್ಕೆ ಬೆನ್ನು ಹಾಕಿ ಮೊಬೈಲ್ ಫೋನ್ ನಲ್ಲಿ ಸೆಲ್ಫೀ ತೆಗೆದುಕೊಳ್ಳುವಾಗ ಸಮುದ್ರದ ಅಲೆ ಅಪ್ಪಳಿಸಿದರ ಪರಿಣಾಮ ಫೀರ್ ಸಾಬನು ಕಾಲು ಜಾರಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ನಾಪತ್ತೆ ಆಗಿದ್ದು ಬುಧವಾರ ಬೆಳಿಗ್ಗೆ ಆತನ ಮೃತದೇಹ ಪತ್ತೆಯಾಗಿದೆ.
ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.