ಮಲೆಮಹದೇಶ್ವರ ಬೆಟ್ಟದ ಲಾಡ್ಜ್ ಗಳಿಗೆ ನೋಟೀಸ್

Spread the love

ಮಲೆಮಹದೇಶ್ವರ ಬೆಟ್ಟದ ಲಾಡ್ಜ್ ಗಳಿಗೆ ನೋಟೀಸ್

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಪವಿತ್ರ ತಾಣ ಮಲೆಮಹದೇಶ್ವರ ಬೆಟ್ಟದಲ್ಲಿ ಕೋವಿಡ್ ನಿಯಮದಂತೆ ಲಾಡ್ಜ್ ಗಳಲ್ಲಿ ಭಕ್ತರ ವಾಸ್ತವ್ಯಕ್ಕೆ ಅವಕಾಶ ನೀಡದಂತೆ ಸೂಚನೆಯಿದ್ದರೂ ಅದನ್ನು ಗಾಳಿಗೆ ತೂರಿ ಕೆಲವು ಖಾಸಗಿ ಲಾಡ್ಜ್‌ಗಳು ಭಕ್ತರ ವಾಸ್ತವ್ಯಕ್ಕೆ ಮುಕ್ತ ಅವಕಾಶ ನೀಡಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೊಲೀಸರು ನೋಟೀಸ್ ನೀಡಿದ್ದಾರೆ.

ಗ್ರಾಮ ಪಂಚಾಯತಿ ಕಚೇರಿ ಬಳಿಯಿರುವ ಹಲವು ಲಾಡ್ಜ್ ಗಳಲ್ಲಿ ಭಕ್ತರು ಕಿಕ್ಕಿರಿದು ಕಾಣಿಸಿಕೊಂಡಿದ್ದು, ಲಾಡ್ಜ್ ಗಳಲ್ಲಿ ತಂಗಲು ವ್ಯವಸ್ಥೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಲಾಕ್ ಡೌನ್ ತೆರವು ಗೊಳ್ಳುತ್ತಿದ್ದಂತೆಯೇ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಬರುವ ಪ್ರವಾಸಿಗರು ಸಂಜೆ ವೇಳೆಗೆ ಬೆಟ್ಟದಿಂದ ಹಿಂತಿರುಗಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಿ ಲಾಡ್ಜ್ ಗಳು ಅವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದೆ.

ಇನ್ನು ಪ್ರಾಧಿಕಾರಕ್ಕೆ ಸೇರಿದ ವಸತಿಗೃಹಗಳಿದ್ದು ಇಲ್ಲಿ ಕಟ್ಟುನಿಟ್ಟಾಗಿ ಭಕ್ತರ ವಾಸ್ತವ್ಯಕ್ಕೆ ನಿಷೇಧ ಹೇರಲಾಗಿದೆ. ಆದರೆ ಇದುವರೆಗೆ ಲಾಕ್ ಡೌನ್ ಇದ್ದ ಕಾರಣ ಗ್ರಾಹಕರಿಲ್ಲದೆ ನಷ್ಟ ಅನುಭವಿಸಿದ ಖಾಸಗಿ ಲಾಡ್ಜ್‌ಗಳು ಇದೀಗ ನಿಯಮ ಗಾಳಿಗೆ ತೂರುತ್ತಿರುವುದು ಎದ್ದು ಕಾಣುತ್ತಿದೆ. ಇದರಿಂದ ಸೋಂಕು ಹೆಚ್ಚುವ ಭಯವೂ ಸ್ಥಳೀಯರನ್ನು ಕಾಡುತ್ತಿದೆ.

ಇದೀಗ ಖಾಸಗಿ ಲಾಡ್ಜ್ ಗಳಲ್ಲಿ ಭಕ್ತರಿಗೆ ವಾಸ್ತವ್ಯ ಹೂಡಲು ಅವಕಾಶ ನೀಡಿರುವುದು ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಠಾಣೆಯಿಂದ ಎಲ್ಲ ಖಾಸಗಿ ಲಾಡ್ಜ್‌ಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ನೋಟೀಸ್ ನಲ್ಲಿ ಮಲೆಮಹದೇಶ್ವರಬೆಟ್ಟದ ದೇವಾಲಯವು ಸರ್ಕಾರದ ಕೆಲವು ನಿಬಂಧನೆಗಳಿಗೆ ಒಳಪಟ್ಟು ಜುಲೈ 5 ರಿಂದ ಸಂಜೆ 6 ಗಂಟೆಯ ನಂತರ ದೇವಾಲಯದ ಆವರಣದಲ್ಲಿ ವಾಸ್ತವ್ಯ ಹೂಡಲು ಅವಕಾಶವಿರುವುದಿಲ್ಲ. ಆದಾಗ್ಯೂ ಕೆಲವು ಲಾಡ್ಜ್ ಮಾಲೀಕರು ಅಕ್ರಮವಾಗಿ ಬಾಡಿಗೆಗೆ ನೀಡುತ್ತಿರುವ ಬಗ್ಗೆ ದೂರು ಬಂದಿರುತ್ತದೆ.

ಆದ್ದರಿಂದ ನಿಮಗೆ ಸಂಬಂಧಿಸಿದ ಲಾಡ್ಜ್ ಮತ್ತು ವಸತಿ ಗೃಹವನ್ನು ಭಕ್ತಾಧಿಗಳಿಗೆ ಯಾವುದೇ ಕಾರಣಕ್ಕೂ ನೀಡಬಾರದು. ಅಕ್ರಮವಾಗಿ ನೀಡಿದ್ದು ಕಂಡು ಬಂದಲ್ಲಿ ನಿಮ್ಮ ಮೇಲೆ ಡಿ.ಎಂ. ಆಕ್ಟ್ 2021 ರೀತ್ಯಾ ಪ್ರಕರಣ ದಾಖಲಿಸುವುದಾಗಿ ಲಾಡ್ಜ್‌ಗಳ ಮಾಲೀಕರುಗಳಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಸಹಿ ಮತ್ತು ಮೊಹರುಳ್ಳ ನೋಟೀಸ್ ನೀಡಲಾಗಿದೆ.

ಪೊಲೀಸರು ನೋಟೀಸ್ ನೀಡಿದ ಬಳಿಕವಾದರೂ ಲಾಡ್ಜ್ ಮಾಲೀಕರು ಭಕ್ತರಿಗೆ ಲಾಡ್ಜ್ ನಲ್ಲಿ ತಂಗಲು ಅವಕಾಶ ಮಾಡಿಕೊಡದೆ ಕೋವಿಡ್ ನಿಯಮವನ್ನು ಪಾಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


Spread the love