ಮಲ್ಪೆಯಲ್ಲಿ 9.50 ಎಕ್ರೆ ಭೂಮಿಯನ್ನು ಮೀನುಗಾರಿಕಾ ಫೆಡರೇಶನ್ ಗೆ ನೀಡುವ ನಿರ್ಧಾರಕ್ಕೆ ರಘುಪತಿ ಭಟ್ ವಿರೋಧ
ಉಡುಪಿ: ಮಲ್ಪೆ ಬಂದರು ವ್ಯಾಪ್ತಿಯ 37554.55 ಚದರ ಮೀಟರ್ ಅಂದರೆ ಸರಿ ಸುಮಾರು 9.50 ಎಕರೆ ವಿಸ್ತೀರ್ಣದ ಬಂದರು ಭೂಮಿಯನ್ನು ಉಡುಪಿ ಶಾಸಕರು ಅಧ್ಯಕ್ಷರಾಗಿರುವ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ನಿಯಮಿತ ಮುಳಿಹಿತ್ಲು, ಬೋಳಾರ್, ಮಂಗಳೂರು ಇವರಿಗೆ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಕರ್ನಾಟಕ ಜಲ ಸಾರಿಗೆ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿ ಅನುಮೋದನೆ ನೀಡಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಉಡುಪಿಯ ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಜಾಗವು ಟೆಬ್ಮಾ ಶಿಫ್ ಯಾರ್ಡ್ ಹಿಂದಿರುವ ಸಿವಾಕ್ ಮತ್ತು ಹನುಮಾನ್ ವಿಠೋಭ ಭಜನಾ ಮಂದಿರದ ಸಮೀಪವಿದ್ದು, ಇದನ್ನು ಮೀನುಗಾರಿಕಾ ಉದ್ದೇಶವೆಂದು ಮೀನುಗಾರಿಕಾ ಫೆಡರೇಷನ್ ಗೆ ಗುತ್ತಿಗೆ ನೀಡಿರುವುದು ಸ್ಥಳೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಹಿಂದೆ ಉಡುಪಿಗೆ ಭೇಟಿ ನೀಡಿದ್ದ ಕೇಂದ್ರ ಮೀನುಗಾರಿಕಾ ಸಚಿವರಾದ ಮುರುಗನ್ ಅವರು ಮೀನುಗಾರಿಕಾ ಸಂಘದ ಮೂಲಕ ಈ ಭಾಗದಲ್ಲಿ 4ನೇ ಹಂತದ ಬಂದರು ಮಾಡುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹನುಮಾನ್ ವಿಠೋಬಾ ಭಜನಾ ಮಂದಿರದವರು ಮತ್ತು ಅಯ್ಯಪ್ಪ ಭಜನಾ ಮಂದಿರದವರು ಇಲ್ಲಿ ಜಾಗ ಮಂಜೂರಾತಿಗೆ ಕೋರಿರುವಂತೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮನವಿ ನೀಡಿದ್ದು, ಅದು ಇರುವಂತೆ ಇಷ್ಟು ವಿಸ್ತೀರ್ಣದ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆ ಎಂದು ಫೆಡರೇಷನ್ ಗೆ ನೀಡಿರುವುದು ಕಾನೂನುಬಾಹಿರ ಮತ್ತು ಜನ ವಿರೋಧಿಯಾಗಿದೆ. ತಕ್ಷಣ ಈ ಆದೇಶವನ್ನು ರದ್ದು ಮಾಡಿ ಮಲ್ಪೆ ಭಾಗದಲ್ಲಿ ಇರುವ 5 ಭಜನಾ ಮಂಡಳಿಗಳ ನೇತೃತ್ವಧ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ಜಾಗ ಮಂಜೂರು ಮಾಡಿ ಮರು ಆದೇಶ ಮಾಡಿ ಆ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು ಎಂದು ರಘುಪತಿ ಭಟ್ ಅವರು ಆಗ್ರಹಿಸಿದ್ದಾರೆ.
ಈ ಭೂಮಿಯನ್ನು ಮೀನುಗಾರಿಕಾ ಫೆಡರೇಷನ್ ಗೆ ನೀಡಿದರೆ ಅಲ್ಲಿ ಖಾಸಗಿಯವರ ನೇತೃತ್ವದಲ್ಲಿ ಫಿಶ್ ಮಿಲ್ ಅಥವಾ ಇನ್ನಿತರ ಮೀನುಗಾರಿಕಾ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಇದು ಸ್ಥಳೀಯವಾಗಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮಲ್ಪೆಯ ಪ್ರವಾಸೋದ್ಯಮಕ್ಕೆ ಮತ್ತು ಸ್ಥಳೀಯ ಜನಜೀವನಕ್ಕೆ ಮಾರಕವಾಗಲಿದೆ. ಮೀನುಗಾರಿಕಾ ಉದ್ದೇಶಕ್ಕೆ ಈ ಭೂಮಿಯನ್ನು ನೀಡುವುದಾದರೆ ಮೀನುಗಾರಿಕಾ ಇಲಾಖೆ ಮೂಲಕ 4ನೇ ಹಂತದ ಬಂದರಿನ ಯೋಜನೆಗೆ ಈ ಜಾಗ ಸೂಕ್ತವಾಗಿದೆ ಎಂದು ತಿಳಿಸಿದ ಅವರು ಇದರಲ್ಲಿ ಶಾಸಕರ ವೈಯಕ್ತಿಕ ಹಿತಾಸಕ್ತಿ ಇದೆ ಎಂಬುದರಲ್ಲಿ ಸಂಶಯವಿಲ್ಲ.
ಶಾಸಕರ ಬಳಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹಾಗೂ ಜನರ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೆ ನಾವು ವಿರೋಧ ಪಕ್ಷದಲ್ಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ನಮ್ಮ ಮಾತಿಗೆ ಬೆಲೆ ಇಲ್ಲ. ಬಿಜೆಪಿ ಶಾಸಕರ ಕೆಲಸಗಳು ಆಗುವುದಿಲ್ಲ ಎನ್ನುವ ಸಬೂಬು ನೀಡುತ್ತಾರೆ. ಆದರೆ ಶಾಸಕರ ಅಧ್ಯಕ್ಷತೆಯ ಮೀನುಗಾರಿಕಾ ಫೆಡರೇಷನ್ ಗೆ ಬೆಲೆಬಾಳುವ ಸುಮಾರು 9.50 ಎಕರೆ ಜಾಗವನ್ನು 15 ವರ್ಷದ ಅವಧಿಗೆ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಕರ್ನಾಟಕ ಜಲಸಾರಿಗೆ ಮಂಡಳಿ ಅನುಮೋದನೆ ನೀಡುತ್ತದೆ. ಅಂದರೆ ಶಾಸಕರು ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ಮಾಡಿದರೇ? ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ವಿರೋಧ ಪಕ್ಷ ಎಂದು ಸಹಕಾರ ನೀಡದ ಸರ್ಕಾರ ಶಾಸಕರ ಸ್ವಂತ ವಿಚಾರಕ್ಕೆ ಹೇಗೆ ಸಹಕಾರ ನೀಡಿತು? ಇಲ್ಲಿ ಶಾಸಕರ ಸ್ವಂತ ಲಾಭದ ಕೆಲಸ ಆಗುತ್ತದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಕೆಲಸಗಳು ಆಗುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಉಡುಪಿ ಶಾಸಕರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಈ ಜಾಗವನ್ನು ಸ್ಥಳೀಯ ಭಜನಾ ಮಂಡಳಿಗಳ ಬೇಡಿಕೆಯಂತೆ ಅವರಿಗೆ ಮಂಜೂರು ಮಾಡಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಈ ಪ್ರಕ್ರಿಯೆಯಲ್ಲಿ ಇನ್ನು ಮೊತ್ತವನ್ನ ಪಾವತಿಸಿ ಕರಾರು ಪತ್ರ ತಯಾರು ಮಾಡಲು ಮಾತ್ರ ಬಾಕಿ ಇರುತ್ತದೆ. ಈ ಸಂಬಂಧ ಈಗಾಗಲೇ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದು ಅವರೊಂದಿಗೆ ಸೇರಿ ಈ ಆದೇಶ ರದ್ದು ಪಡಿಸುವವರೆಗೆ ಉಗ್ರವಾದ ಹೋರಾಟವನ್ನು ನಡೆಸುವ ಎಚ್ಚರಿಕೆ ನೀಡಿದ ಅವರು ಯಾವುದೇ ಕಾರಣಕ್ಕೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾದ ಈ ಆದೇಶವನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಉಡುಪಿ ಜಿಲ್ಲಾಡಳಿತ ಮಲ್ಪೆ ಅಭಿವೃದ್ಧಿ ಸಮಿತಿಯನ್ನು ರದ್ದು ಮಾಡಿ ಪ್ರವಾಸೋದ್ಯಮ ಸಮಿತಿ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಮದ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯವರು ಮತ್ತು ಮೀನುಗಾರಿಕೆ, ಬಂದರು ಒಳನಾಡು ಜಲ ಸಾರಿಗೆ ಸಚಿವರು ತಕ್ಷಣ ಕರ್ನಾಟಕ ಜಲ ಸಾರಿಗೆ ಮಂಡಳಿ ನೀಡಿದ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಜಾಗದಲ್ಲಿ ಟೂರಿಸ್ಟ್ ಬೋಟಿನ ಜಟ್ಟಿ, ಸೀವಾಕ್ ಮತ್ತು ಪಾರ್ಕಿಂಗ್ ಏರಿಯಾ ಇದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಟಿಯಿಂದ ನಾನು ಶಾಸಕನಾಗಿದ್ದ ಅವಧಿಯಲ್ಲಿ ಹಾಗೂ ಪ್ರಮೋದ್ ಮಧ್ವರಾಜ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರದಿಂದ ಸುಮಾರು 8 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ ಅಭಿವೃದ್ಧಿಪಡಿಸಲಾಗಿದೆ. ಪ್ರವಾಸಿಗರ ಉತ್ತಮ ಸ್ಪಂದನೆಯಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಟಿಯಿಂದ ಈ ಭಾಗದಲ್ಲಿ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿಯಲ್ಲಿ ಅತ್ಯುತ್ತಮ ಪಾತ್ರ ವಹಿಸಿರುವ ಈ ಭಾಗದ 5 ಭಜನಾ ಮಂಡಳಿಗಳನ್ನು ಒಳಗೊಂಡ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.
