ಮಲ್ಪೆಯಿಂದ ನಾಪತ್ತೆಯಾದ ಮೀನುಗಾರರ ಪತ್ತೆ ಒತ್ತಾಯಿಸಿ ಮೋದಿಗೆ ರಾಹುಲ್ ಪತ್ರ
ಕೇರಳ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೀನುಗಾರರ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪಾರ್ಲಿಮೆಂಟ್ ಮಾರ್ಚ್ 14ರಂದು ಕೇರಳದ ತರಿಯಾಪುರದಲ್ಲಿ ನಡೆಯಿತು.
ಈ ವೇಳೆ ರಾಷ್ಟ್ರೀಯ ಫಿಶರ್ ಮೆನ್ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಕಿರಣ್ ಕುಮಾರ್ ಉದ್ಯಾವರ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಏಳು ಮಿನುಗಾರರು ಮತ್ತು ಸುವರ್ಣ ತ್ರಿಭುಜ ಬೋಟ್ ಇನ್ನೂ ಕೂಡ ಪತ್ತೆಯಾಗದಿರುವ ಕುರಿತು ಪಾರ್ಲಿಮೆಂಟ್ ನಲ್ಲಿ ವಿಷಯ ಪ್ರಸ್ತಾಪಿಸಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ ಗಮನಕ್ಕೆ ತಂದರು.
ಮೀನುಗಾರರು ತಮ್ಮ ಸುವರ್ಣ ತ್ರಿಭುಜ ಬೋಟ್ ನೊಂದಿಗೆ ಕಾಣೆಯಾಗಿ 89 ದಿನಗಳು ಕಳೆದರೂ ಕೂಡ ಯಾವುದೇ ರೀತಿಯ ಕುರುಹು ಕೂಡ ಪತ್ತೆಯಾಗಿಲ್ಲ. ರಾಜ್ಯ ಸರಕಾರ ತನ್ನ ಪಾಲಿನ ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಆದರೆ ಕೇಂದ್ರ ಸರಕಾರ ಮೀನುಗಾರರ ಕುರಿತು ನಿರ್ಲಕ್ಷ್ಯ ಭಾವನೆ ತೋರಿದೆ. ಏಳು ಮಂದಿ ಮೀನುಗಾರರ ಕುಟುಂಬಗಳು ಕಳೆದ ಮೂರು ತಿಂಗಳುಗಳಿಂದ ನೋವಿನಲ್ಲೇ ಕೈ ತೊಳೆಯುತ್ತಿದ್ದು ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದರು.
ಮುಂದುವರಿದು ಮಾತನಾಡಿದ ಕಿರಣ್ ಅವರು, ಮೋದಿ ಮಹಾನ್ ಸುಳ್ಳುಗಾರರಾಗಿದ್ದು, ಅವರ ಬಳಿ ತೆರಳಿದ ನಿಯೊಗಕ್ಕೆ ಮೀನುಗಾರರನ್ನು ಹುಡುಕಲು ಸೇನೆಯ ನೆರವು ನೀಡುವುದಾಗಿ ಹೇಳಿದ್ದರು ಆದರೆ ಅವರು ಅದನ್ನೀಗ ಮರೆತಿದ್ದಾರೆ. ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಧಾಳಿ ನಡೆಸಿ ಗೆದ್ದಿರುವ ಸೈನ್ಯದ ಸಹಾಯವನ್ನು ಉಪಯೋಗಿಸಿ ಮೀನುಗಾರರನ್ನು ಹುಡುಕುವ ಕೆಲಸವನ್ನು ಮೋದಿ ಕೂಡಲೇ ಮಾಡಬೇಕು. ಈ ವಿಚಾರದ ಬಗ್ಗೆ ಮೋದಿಯವರ ಗಮನ ಸೆಳೆಯಲು ಕಿರಣ್ ರಾಹುಲ್ ಅವರಿಗೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಈ ಕುರಿತು ಕೂಡಲೇ ಮೋದಿಯವರಿಗೆ ಪತ್ರಬರೆದು ಹುಡುಕಾಟ ತೀವ್ರಗೊಳಿಸುವಂತೆ ಒತ್ತಾಯಿಸುವುದಾಗಿ ಹೇಳಿದರು. ಮೋದಿಯವರಿಗೆ ಮೀನುಗಾರರ ಮತ್ತು ರೈತರ ಕುರಿತು ಯಾವುದೇ ಕಾಳಜಿ ಇಲ್ಲ. ಅವರು ಪ್ರಥಮ ಆದ್ಯತೆ ನೀಡುವುದು ಅಂಬಾನಿ, ನೀರವ್ ಮೋದಿ, ಮಹುಲ್ ಚೋಕ್ಸಿ ಅವರುಗಳನ್ನು ರಕ್ಷಿಸುವ ಕೆಲಸ ಮೋದಿ ಮಾಡುತ್ತಿದ್ದಾರೆ.
ಮೋದಿ ಕೇವಲ ಉದ್ಯಮಿಗಳ ಪರವಾಗಿ ಇದ್ದು ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರವಾಗಿ ರೈತರ ಪರವಾಗಿ ದನಿ ಎತ್ತುತ್ತಿದೆ ಎಂದು ಹೇಳಿದರು.