ಮಲ್ಪೆ ಬೀಚ್‌ ಉತ್ಸವಕ್ಕೆ ಸಂಭ್ರಮದ ತೆರೆ

Spread the love

ಮಲ್ಪೆ ಬೀಚ್‌ ಉತ್ಸವಕ್ಕೆ ಸಂಭ್ರಮದ ತೆರೆ

ಉಡುಪಿ: ರಜತ ಮಹೋತ್ಸವದ ಭಾಗವಾಗಿ ಮಲ್ಪೆಯ ಕಡಲ ತೀರದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಮಲ್ಪೆ ಬೀಚ್‌ ಉತ್ಸವಕ್ಕೆ ಭಾನುವಾರ ತೆರೆಬಿತ್ತು. ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳ ಸಾವಿರಾರು ಪ್ರವಾಸಿಗರು ಬೀಚ್ ಹಬ್ಬವನ್ನು ಕಣ್ತುಂಬಿಕೊಂಡರು.

ರವಿವಾರ ಮಧ್ಯಾಹ್ನದ ಬಳಿಕ ಬೀಚ್‌ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಣ್ಣು ಹಾಯಿಸಿದಷ್ಟು ದೂರ ಜನ ಸಮೂಹವೇ ಕಂಡು ಬಂದಿತು ಸುಮಾರು 60 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಸಂಭ್ರಮಿಸಿದರು.

ಬೆಳಗ್ಗಿನಿಂದ ಸಂಜೆಯವರೆಗೂ ಬೀಚ್‌ನಲ್ಲಿ ವಿವಿಧ ಸ್ಪರ್ಧೆಗಳು ನಡೆದವು. ಬೀಚ್‌ ತ್ರೋಬಾಲ್‌, ಮರಳು ಶಿಲ್ಪ, ಚಿತ್ರಕಲೆ, ಶ್ವಾನ ಪ್ರದರ್ಶನ ನಡೆದವು. ವೈವಿಧ್ಯಮಯ ಆಹಾರಗಳನ್ನು ಸವಿಯುವ ಅವಕಾಶ ನೀಡಲಾಗಿತ್ತು. ಆಹಾರದ ಕೌಂಟರ್‌ಗಳಲ್ಲಿ ಸಾಗರೋತ್ಪನ್ನದ ರುಚಿ ಸವಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಐತಿಹಾಸಿಕ ರಜತ ಉತ್ಸವ-ಬೀಚ್ ಉತ್ಸವವು ಸಾಗರದ ಮಧ್ಯೆ ಜನಸಾಗರ ಸೇರಿಕೊಂಡು ಯಶಸ್ವಿಯಾಗಿ ನಡೆದಿದೆ. ಕೋವಿಡ್‌ನಿಂದ ನಲುಗಿದ್ದ ಪ್ರವಾಸೋದ್ಯಮಕ್ಕೆ ಕ್ಷೇತ್ರಕ್ಕೆ ರಜತ ಮಹೋತ್ಸವ ಚೇತರಿಕೆ ನೀಡಿದೆ ಎಂದರು.

ಮೂರು ದಿನಗಳ ಬೀಚ್ ಉತ್ಸವದಲ್ಲಿ ಚಿತ್ರ ಕಲಾಕೃತಿಗಳ ಸ್ಪರ್ಧೆ, ಉಡುಪಿಯ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳ ಪ್ರದರ್ಶನ, ಮರಳು ಶಿಲ್ಪ ರಚನೆ, ಕಬ್ಬಡ್ಡಿ, ಥ್ರೋಬಾಲ್‌, ವಿಭಿನ್ನ ವಾಟರ್‌ ಸ್ಫೋರ್ಟ್ಸ್‌ಗಳು, ಕ್ಲಿಫ್ ಡೈವಿಂಗ್, ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ, ಕಯಾಕಿಂಗ್‌, ಸ್ಕೂಬಾ ಡೈವಿಂಗ್‌, ಯಾಟ್‌ನೊಳಗೆ ಸಂಚರಿಸುವ ವಿಶಿಷ್ಟ ಅನುಭವವನ್ನು ಪ್ರವಾಸಿಗರಿಗೆ ಕೊಡಲಾಗಿದೆ.

ರಾಜೇಶ್ ಕೃಷ್ಣನ್‌, ಕುನಾಲ್ ಗಾಂಜಾವಾಲ ಹಾಗೂ ರಘು ದೀಕ್ಷಿತ್ ರಸ ಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿವೆ. ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳು, ಪ್ರಾಯೋಜಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಬೀಚ್ ಉತ್ಸವ ಯಶಸ್ವಿಯಾಗಿದೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, 1997ರಲ್ಲಿ ರಚನೆಯಾದ 9 ನೂತನ ಜಿಲ್ಲೆಗಳಲ್ಲಿ ಉಡುಪಿಯೂ ಒಂದಾಗಿದ್ದು ಅದ್ಧೂರಿಯಾಗಿ ರಜತ ಮಹೋತ್ಸವ ನಡೆಯುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡಲು ಮಲ್ಪೆ ಬೀಚ್‌ನಲ್ಲಿ ಮೊದಲ ಬಾರಿಗೆ ಫ್ಲೈಬೋರ್ಡ್‌, ಕ್ಲಿಫ್ ಡೈವಿಂಗ್ ಹಾಗೂ ಸ್ಕೂಬಾ ಡೈವಿಂಗ್ ಪರಿಚಯಿಸಲಾಗಿದೆ.

ಮುಂಬೈನಿಂದ ಯಾಟ್‌ ಪ್ರವಾಸಿ ಹಡಗನ್ನು ತರಿಸಿ ಪ್ರವಾಸಿಗರಿಗೆ ವಿಭಿನ್ನವಾದ ಅನುಭವ ನೀಡಲಾಗುತ್ತಿದೆ. ಒಂದು ತಿಂಗಳು ಯಾಟ್‌ ಮಲ್ಪೆ ತೀರದಲ್ಲಿ ಇರಲಿದ್ದು ಸದುಪಯೋಗಪಡಿಸಿಕೊಳ್ಳಬೇಕು. ವಾಟರ್‌ ಸ್ಫೋರ್ಟ್ಸ್‌ ಹಾಗೂ ಅಡ್ವೆಂಚರ್ಸ್‌ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಮೀನುಗಾರಿಕೆಯ ಜತೆಗೆ ಪ್ರವಾಸೋದ್ಯಮವನ್ನು ಎತ್ತರಕ್ಕೆ ಬೆಳೆಸಲು ವಿಫುಲ ಅವಕಾಶಗಳಿದ್ದು ಸ್ಥಳೀಯರ ಮನಸ್ಥಿತಿ ಬದಲಾಗಬೇಕು. ಪ್ರವಾಸಿಗರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಎಸ್‌.ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ, ಜಿಲ್ಲಾ ಪಂಚಾಯಿತಿ ಎಚ್.ಪ್ರಸನ್ನ, ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಮೈಸೂರು ಎಲೆಕ್ಟ್ರಿಕಲ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇದ್ದರು.


Spread the love

Leave a Reply

Please enter your comment!
Please enter your name here