
ಮಲ್ಪೆ: ಸಮುದ್ರ ಎಂದು ನಮೂದಾಗಿರುವ ಜಾಗ ಕಂದಾಯದಲ್ಲಿ ಸೇರಿಸಿ ಖಾಯಂ ನಿವೇಶನ ಹಕ್ಕುಪತ್ರ ಮಂಜೂರು, ವಿತರಣೆ
ಮಲ್ಪೆ ಕೊಳ ಹಾಗೂ ಮಲ್ಪೆ ಪಡುಕೆರೆ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯವಿರುವ 143 ಮೀನುಗಾರರ ಕುಟುಂಬಗಳಿಗೆ ಮಂಗಳವಾರ ಶಾಸಕರಾದ ಕೆ. ರಘುಪತಿ ಭಟ್ ರವರು ಖಾಯಂ ನಿವೇಶನ ಹಕ್ಕುಪತ್ರವನ್ನು ವಿತರಿಸಿದರು.
ಮಲ್ಪೆ ಕೊಳ ಹಾಗೂ ಮಲ್ಪೆ ಪಡುಕೆರೆ ಪ್ರದೇಶದಲ್ಲಿ ಬಹಳ ವರ್ಷಗಳ ಹಿಂದಿನಿಂದ ಮನೆ ನಿರ್ಮಿಸಿಕೊಂಡು ವಾಸ್ತವ್ಯವಿರುವ ಮೀನುಗಾರರ ಕುಟುಂಬಗಳಿಗೆ ಖಾಯಂ ನಿವೇಶನ ಹಕ್ಕು ಪತ್ರ ನೀಡುವಲ್ಲಿ 57 ಎಕ್ರೆ ಪ್ರದೇಶವು ದಾಖಲೆಯಲ್ಲಿ ಸಮುದ್ರ ಎಂದು ನಮೂದಾಗಿತ್ತು. ಈ ತೊಡಕನ್ನು ನಿವಾರಿಸಲು ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ರಘುಪತಿ ಭಟ್ ಅವರು ಅಂದಿನ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಲ್ಲಿ ನಿರಂತರ ಸಂಪರ್ಕದಲ್ಲಿದ್ದುಕೊಂಡು ಪ್ರಯತ್ನಿಸಿರುವುದರಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಸಮುದ್ರ ಎಂದು ನಮೂದಾಗಿರುವ ನಿವೇಶನವನ್ನು ಸರ್ವೇ ನಂಬರ್ ಸಹಿತ ಕಂದಾಯ ಇಲಾಖೆಯಲ್ಲಿ ದಾಖಲಿಸಿ ಅಧಿಸೂಚನೆಯನ್ನು ಹೊರಡಿಸಿ 358 ಕುಟುಂಬಗಳಿಗೆ ಪ್ರಾರಂಭಿಕ ಹಂತದಲ್ಲಿ ಖಾಯಂ ನಿವೇಶನ ಹಕ್ಕು ಪತ್ರವನ್ನು ನೀಡಲಾಗಿತ್ತು.
ಸಿ.ಆರ್.ಝಡ್ ನಿಯಮಾವಳಿಯಲ್ಲಿನ ಸಮಸ್ಯೆಯಿಂದಾಗಿ 143 ಕುಟುಂಬಗಳಿಗೆ ಹಕ್ಕುಪತ್ರವನ್ನು ನೀಡುವಲ್ಲಿ ತೊಡಕುಂಟಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಿ ವಿಶೇಷ ಪ್ರಕರಣದಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರವನ್ನು 2ನೇ ಹಂತದಲ್ಲಿ 143 ಅರ್ಹ ಫಲಾನುಭವಿಗಳ ಕುಟುಂಬಗಳಿಗೆ ಶಾಸಕರಾದ ಕೆ. ರಘುಪತಿ ಭಟ್ ರವರು ಮನೆ ಮನೆಗೆ ಭೇಟಿ ನೀಡಿ ವಿತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ವಿಜಯ್ ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಹಾಗೂ ಮೀನುಗಾರ ಮುಖಂಡ ಸ್ಥಳೀಯ ಉಪಸ್ಥಿತರಿದ್ದರು.