ಮಳೆನೀರಿನಲ್ಲಿ ಸಿಲುಕಿದ್ದ ದ್ವಿಚಕ್ರ ವಾಹನವನ್ನು ಸರಿಸಿಕೊಟ್ಟು ಮಾನವೀಯತೆ ಮೆರೆದ ಪೊಲೀಸ್ ಸಿಬಂದಿಗಳು

Spread the love

ಮಳೆನೀರಿನಲ್ಲಿ ಸಿಲುಕಿದ್ದ ದ್ವಿಚಕ್ರ ವಾಹನವನ್ನು ಸರಿಸಿಕೊಟ್ಟು ಮಾನವೀಯತೆ ಮೆರೆದ ಪೊಲೀಸ್ ಸಿಬಂದಿಗಳು

ಉಡುಪಿ: ಮಲ್ಪೆ – ಮಣಿಪಾಲ ರಸ್ತೆಯ ಇಂದ್ರಾಳಿ ರೈಲ್ವೆ ಮೇಲ್ ಸೇತುವೆ ಬಳಿ ಬಾಕಿ ಉಳಿದಿರುವ ಕಾಮಗಾರಿ ನಡೆಯುತ್ತಿದ್ದು ಪ್ರತಿ ನಿತ್ಯ ಟ್ರಾಫಿಕ್ ಸಮಸ್ಯೆಯನ್ನು ಸುಗಮಗೊಳಿಸಲು ಪೊಲೀಸರು ಹಗಲು ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆಯೂ ಕೆಲವೊಮ್ಮೆ ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಟೀಕೆಯ ಮಾತುಗಳು ಕೇಳಿ ಬಂದರೂ ಕೂಡ ತಮ್ಮ ಕರ್ತವ್ಯದ ನಡುವೆಯೂ ಮಾನವೀಯತೆ ಮೆರೆಯುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಶನಿವಾರ ಸಂಜೆ ಉಡುಪಿಯಲ್ಲಿ ಧೀಡಿರ್ ಮಳೆ ಬಂದಿದ್ದು ಈ ವೇಳೆ ಮಲ್ಪೆ – ಮಣಿಪಾಲ ರಸ್ತೆಯ ಇಂದ್ರಾಳಿ ರೈಲ್ವೆ ಮೇಲ್ ಸೇತುವೆ ಬಳಿ ಕಾಮಗಾರಿಯಿಂದಾಗಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು.

ಈ ನಡುವೆ ಮಹಿಳೆಯೋರ್ವರು ನೀರು ತುಂಬಿದ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಲು ಪರದಾಡುತ್ತಿದ್ದಾಗ ಕರ್ತವ್ಯದಲ್ಲಿದ ಮಣಿಪಾಲ ಠಾಣೆಯ ಕಾನ್ ಸ್ಟೇಬಲ್ ಸಂಖ್ಯೆ 155 ಶರಣಬಸವ ಮತ್ತು ಕಾನ್ ಸ್ಟೇಬಲ್ ಸಂಖ್ಯೆ 28 ಮಂಜುನಾಥ್ ಕೂಡಲೇ ಅವರ ನೆರವಿಗೆ ಧಾವಿಸಿ ಮಹಿಳೆಗೆ ಸಹಾಯ ಹಸ್ತ ಚಾಚಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರು ಕಳೆದ 18 ದಿನಗಳಿಂದ ಕನಿಷ್ಠ 7-8 ಜನ ಪೊಲೀಸ್ ಸಿಬಂದಿ ಹಗಲು ರಾತ್ರಿ ಎನ್ನದೆ ಧೂಳಿನಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ನಡೆಯುವಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದಾರೆ. ಕೆಲವೊಮ್ಮೆ ಸಾರ್ವಜನಿಕರು ಕೂಡ ಟ್ರಾಫಿಕ್ ಜಾಮ್ ಆದಾಗ ಮೊದಲು ಬೈಯ್ಯುವುದು ಪೊಲೀಸರನ್ನು ಆದರೆ ಯಾವುದೇ ಸಂಯಮ ಕಳೆದು ಕೊಳ್ಳದೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಮಣಿಪಾಲ ಠಾಣೆಯ ಕಾನ್ ಸ್ಟೇಬಲ್ ಸಂಖ್ಯೆ 155 ಶರಣಬಸವ ಮತ್ತು ಕಾನ್ ಸ್ಟೇಬಲ್ ಸಂಖ್ಯೆ 28 ಮಂಜುನಾಥ್ ಅವರ ಮಾನವೀಯ ಸೇವೆಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.


Spread the love