ಮಸೀದಿಗಳಲ್ಲಿ ಪ್ರಾರ್ಥನೆಗೆ 50 ಜನರ ಮಿತಿ: ಬಕ್ರೀದ್‌ ಆಚರಣೆಗೆ ಮಾರ್ಗಸೂಚಿ ಪ್ರಕಟ

Spread the love

ಮಸೀದಿಗಳಲ್ಲಿ ಪ್ರಾರ್ಥನೆಗೆ 50 ಜನರ ಮಿತಿ: ಬಕ್ರೀದ್‌ ಆಚರಣೆಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಇದೇ 21ರಂದು ನಡೆಯಲಿರುವ ಬಕ್ರೀದ್‌ ಹಬ್ಬ ಆಚರಣೆಯ ವೇಳೆ ಮಸೀದಿಗಳಲ್ಲಿ ಒಮ್ಮೆಗೆ 50 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ನಮಾಜ್‌ ಮಾಡುವಾಗ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು. ಮಸೀದಿ ಪ್ರವೇಶಿಸುವ ಮುನ್ನ ದೇಹದ ತಾಪಮಾನ ಪರೀಕ್ಷಿಸಬೇಕು. ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪ್ರಾರ್ಥನೆ ಸಲ್ಲಿಸಲು ಅಗತ್ಯವಿರುವ ಮುಸಲ್ಲಾವನ್ನು (ವಸ್ತ್ರ) ಮನೆಯಿಂದಲೇ ತರುವಂತೆ ಸೂಚಿಸಬೇಕು. ಆಲಿಂಗನ ಮತ್ತು ಹಸ್ತಲಾಘವಕ್ಕೆ ಅವಕಾಶ ನೀಡಬಾರದು. 50ಕ್ಕಿಂತ ಹೆಚ್ಚು ಜನರು ಸೇರಿದಲ್ಲಿ ಪಂಕ್ತಿಯ ಆಧಾರದಲ್ಲಿ ಪ್ರಾರ್ಥನೆ ಸಲ್ಲಿಸಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.

ಪ್ರಾಣಿ ವಧೆಗೆ ನಿರ್ಬಂಧ: ಬಕ್ರೀದ್‌ ಹಬ್ಬದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ.

ರಸ್ತೆಗಳು, ಪಾದಚಾರಿ ಮಾರ್ಗಗಳು, ಆಸ್ಪತ್ರೆಗಳ ಆವರಣಗಳು, ನರ್ಸಿಂಗ್‌ ಹೋಂಗಳ ಒಳ ಮತ್ತು ಹೊರಾಂಗಣಗಳು, ಶಾಲಾ, ಕಾಲೇಜುಗಳ ಒಳಾಂಗಣ ಮತ್ತು ಹೊರಾಂಗಣ, ಆಟದ ಮೈದಾನ, ಮಸೀದಿ ಮತ್ತು ಇತರೆ ಧಾರ್ಮಿಕ ಸ್ಥಳಗಳು, ಉದ್ಯಾನದ ಒಳಗೆ, ಹೊರಗೆ ಸೇರಿದಂತೆ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.


Spread the love