ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ನವೀಕೃತ ಉಚ್ಚಿಲ ಶಾಖೆ ಮತ್ತು ನೂತನ ಎ.ಟಿ.ಎಮ್ ಉದ್ಘಾಟನೆ

Spread the love

ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ನವೀಕೃತ ಉಚ್ಚಿಲ ಶಾಖೆ ಮತ್ತು ನೂತನ ಎ.ಟಿ.ಎಮ್ ಉದ್ಘಾಟನೆ

ಉಡುಪಿ: ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದ ಮೀನುಗಾರಿಕೆ ಉದ್ಯಮದಲ್ಲಿ ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಕನಸು ಸಾಕಾರಗೊಳ್ಳಲಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಮಹಾಲಕ್ಷ್ಮೀ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ನವೀಕೃತ ಉಚ್ಚಿಲ ಶಾಖೆ ಉದ್ಘಾಟನೆ ಮತ್ತು ನೂತನ ಎಟಿಎಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ವರೆಗೆ ರಾಜ್ಯ ಕರಾವಳಿಯಲ್ಲಿ ಮೀನುಗಾರಿಕೆಗೆ ಉಪಯೋಗಿಸುವ ದೋಣಿಗಳಿಗೆ 95% ಚೀನಾ ನಿರ್ಮಿತ ಹಾಗೂ 2% ಜಪಾನ್ ನಿರ್ಮಿತ ಎಂಜಿನ್ ಗಳನ್ನು ಬಳಸುತ್ತಿದ್ದು ಅದನ್ನು ಸಂಪೂರ್ಣವಾಗಿ ನಿಷೇಧಿಸಿ ಭಾರತ ನಿರ್ಮಿತ ಎಂಜಿನ್ ಗಳನ್ನು ಅಳವಡಿಸುವ ನಿಟ್ಟಿನಲ್ಲಿ ದೇಶದ 8 ಉನ್ನತ ಕಂಪೆನಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಅದರಂತೆ ಅವರುಗಳು ಮುಂದಿನ 3 ತಿಂಗಳಿನಲ್ಲಿ ಇದರ ನಿಟ್ಟಿನಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದು ಎಂದರು. ಈ ಮೂಲಕ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕನಸು ನನಸುಗೊಳಿಸುವತ್ತ ಪ್ರಯತ್ನ ನಡೆಸಲು ಕರ್ನಾಟಕ ಸರಕಾರ ಬದ್ದವಾಗಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಹೆಜಮಾಡಿ ಬಂದರಿಗೆ ಅನುಮೊದನೆ ದೊರೆತು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ರೂ181 ಕೋಟಿಗಳ ಯೋಜನೆಗೆ ಈ ತಿಂಗಳ ಕೊನೆಯ ಒಳಗೆ ಮುಖ್ಯಮಂತ್ರಿಗಳಿಂದ ಶಿಲನ್ಯಾಸ ನಡೆಸಲಾಗುವುದು ಎಂದರು.

ನಾಡೋಜ ಜಿ ಶಂಕರ್ ಮಾತನಾಡಿ ಕೋ ಅಪರೇಟಿವ್ ಬ್ಯಾಂಕ್ ಗಳು ಬಡ ಮೀನುಗಾರರ ಹಾಗೂ ಶ್ರಮಿಕ ವರ್ಗದವರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು ಅಂತಹ ಬ್ಯಾಂಕ್ ಸದಸ್ಯರಿಗೆ ಸಿಗುವ ಡಿವಿಡೆಂಟ್ ಈ ಬಾರಿ ರಿಸರ್ವ್ ಬ್ಯಾಂಕ್ ಸೂಚನೆಯಂತೆ ನಿಲ್ಲಿಸಲಾಗಿದ್ದು ಕೂಡಲೇ ಅದನ್ನು ಬಿಡುಗಡೆ ಮಾಡುವಂತೆ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಕೋ ಅಪರೇಟಿವ್ ಬ್ಯಾಂಕ್ ಗಳ ಸದಸ್ಯರಿಗೆ ನೀಡಲಾಗುವ ಡಿವಿಡೆಂಟ್ ನ್ನು ರಿಸರ್ವ್ ಬ್ಯಾಂಕ್ ನಿಲ್ಲಿಸಿಲ್ಲ ಬದಲಾಗಿ ಕೊರೋನಾ ಹಿನ್ನಲೆಯಲ್ಲಿ ಬ್ಯಾಂಕ್ ಗಳಲ್ಲಿ ಡೆಪಾಸಿಟ್ ಮೊತ್ತ ಕಡಿಮೆಯಾಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ತಡೆಹಿಡಿಯಲಾಗಿದ್ದು ಮುಂದಿನ ವರ್ಷದಲ್ಲಿ ಎರಡು ವರ್ಷದ ಡಿವಿಡೆಂಟ್ ನ್ನು ಒಟ್ಟಿಗೆ ನೀಡಲಾಗುತ್ತದೆ ಈ ವಿಚಾರದಲ್ಲಿ ಗ್ರಾಹಕರು ಗಾಬರಿಯಾಗುವುದು ಅಗತ್ಯವಿಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ|ಎಂ ಎನ್ ರಾಜೇಂದ್ರ ಕುಮಾರ್ ಅವರು ಮಾತನಾಡಿ ಕೋ ಅಪರೇಟಿವ್ ಸೊಸೈಟಿ ಹಾಗೂ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಆದಾಯ ತೆರಿಗೆಯನ್ನು ವಿಧಿಸಿದ್ದು ಇದರಿಂದ ಸಮಸ್ಯೆಯಾಗುತ್ತಿದ್ದು ಕೂಡಲೇ ಇದನ್ನು ರದ್ದುಗೊಳಿಸಬೇಕಿದೆ. ವಾಣಿಜ್ಯ ಬ್ಯಾಂಕುಗಳಿಗಿಂತ ಕೋ ಅಪರೇಟಿವ್ ಬ್ಯಾಂಕುಗಳು ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಸರಕಾರಗಳು ಅವುಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಸಮಾರಂಭದಲ್ಲಿ ಕಾಪು ಪುರಸಭೆಯ ನೂತನ ಅಧ್ಯಕ್ಷರಾದ ಅನಿಲ್ ಕುಮಾರ್, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭಾ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಸುಧಾಮ ಶೆಟ್ಟಿ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಹಿರಿಯ ಅರ್ಚಕರಾದ ವೆಂಕಟ ನರಸಿಂಹ ಉಪಾಧ್ಯಾಯ, ರಾಜ್ಯ ಮೀನುಗಾರಿಕೆ ಇಲಾಖೆಯಿಂದ ನೀಡಲ್ಪಡುವ ಶ್ರೇಷ್ಠ ಮೀನುಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಹಿರಿಯ ಮೀನುಗಾರರಾದ ರಾಮ ಕಾಂಚನ್, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಣಾಮ್ ಕೆ ಸಾಲ್ಯಾನ್ ಮತ್ತು ಶ್ರೇಯಾ ಬಿ. ಕುಂದರ್ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರೀತು.

ಮೀನುಗಾರ ಮಹಿಳಾ ಸ್ವ ಸಹಾಯ ಸಂಘಗಳಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ, ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರಸರಕಾರದ ಬಡವರ ಬಂಧು ಯೋಜನೆಯಡಿ ಬಡ್ಡಿರಹಿತ ಸಾಲ ಯೋಜನೆ ಠೇವಣಿಗಳ ಮೇಲೆ 0.50% ಹೆಚ್ಚುವರಿ ಬಡ್ಡಿ ಹಾಗೂ ಹೊಸ ಗ್ರಾಹಕರಿಗೆ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಮತ್ತು ಉಚಿತ ಎಟಿಎಮ್ ಕಾರ್ಡ್ ನೀಡುವ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ತುಳು ಲಿಪಿಯಲ್ಲಿ ಅಳವಡಿಸಲಾದ ನಾಮ ಫಲಕವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ರವರು ಅನಾವಣಗೊಳಿಸಿದರು

ನವೀಕೃತ ಶಾಖೆಯ ಉದ್ಘಾಟನೆಯನ್ನು ಭಾರತೀಯ ರಿಸರ್ವ್ ಬ್ಯಾಂಕಿನ ನಿದೇರ್ಶಕರಾದ ಸತೀಶ್ ಕಾಶೀನಾಥ ಮರಾಠೆ ಯವರು ನೆರವೇರಿಸಿದರು. ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಭಾಗವಹಿಸಿದ್ದರು.

ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಸುರೇಶ್ ನಾಯಕ್ ಕುಯಿಲಾಡಿ, ಆನಂದ ಪಿ. ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಎಚ್ ಡಿ ಎಫ್ ಸಿ ಬ್ಯಾಂಕಿನ ಕ್ಲಸ್ಟರ್ ಹೆಡ್ ಚಿದಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ಶಿಲ್ಪಾ ಜಿ. ಸುವರ್ಣ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಉಪಾಧ್ಯಾಯ ರವರು ಉಪಸ್ಥಿತರಿದ್ದರು.

ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನಿತರ ಆಧುನಿಕ ತಂತ್ರಜ್ಞಾನದ ಸೇವೆಯನ್ನು ಒದಗಿಸುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಂಗಳೂರಿನಲ್ಲಿಯೂ ಶಾಖೆಗಳನ್ನು ಆರಂಭಿಸುವ ಮೂಲಕ ವ್ಯವಹಾರ ವಿಸ್ತರಿಸುವ ಯೋಜನೆ ಕೂಡಾ ಆಡಳಿತ ಮಂಡಳಿಯ ಮುಂದಿದೆ ಎಂದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಜಿ ಕೆ ಶೀನಾ ವಂದಿಸಿದರು, ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love