ಮಾಂಸದೂಟ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

Spread the love

ಮಾಂಸದೂಟ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

ತಿ.ನರಸೀಪುರ: ಕಾಂಗ್ರೆಸ್ ಒಕ್ಕಲಿಗರ ಸಭೆಗೆ ಆಗಮಿಸಿದವರಿಗೆ ನೀಡಲು ತಯಾರಿಸಿಟ್ಟಿದ್ದ ಊಟವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಬನ್ನೂರು ಪಟ್ಟಣದ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ತಿ.ನರಸೀಪುರ ವಿಧಾನಸಭಾ ವ್ಯಾಪ್ತಿಗೆ ಬರುವ ಬನ್ನೂರಿನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ವತಿಯಿಂದ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಗೆ ಒಕ್ಕಲಿಗ ಸಮಾಜದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಮಹದೇವಪ್ಪ ಪಾಲ್ಗೊಂಡು ಸಭೆಯನ್ನುದ್ಧೇಶಿಸಿ ಮಾತನಾಡಲಿದ್ದರು. ಹೀಗಾಗಿ ಸಭೆಗೆ ಆಗಮಿಸುವ ಒಕ್ಕಲಿಗ ಸಮಾಜದ ಮುಖಂಡರಿಗೆ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಬನ್ನೂರು ಸೇರಿದಂತೆ ಸುತ್ತಮುತ್ತಲ ಒಕ್ಕಲಿಗ ಸಮಾಜದ ಮುಖಂಡರು ಆಗಮಿಸಿದ್ದರಿಂದ ಅವರಿಗಾಗಿಯೇ ಕಲ್ಯಾಣ ಮಂಟಪದಲ್ಲಿ ಬಿರಿಯಾನಿ, ಚಿಕನ್, ಮೊಟ್ಟೆ ಹೀಗೆ ಭರ್ಜರಿ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ಹೀಗೆ ಊಟ ನೀಡುವುದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿರುವುದರಿಂದಾಗಿ ವಿಷಯ ತಿಳಿದ ಚುನಾವಣಾಧಿಕಾರಿಗಳು ಸ್ಥಳಕ್ಕೆ ತೆರಳಿ ಊಟವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದೆಲ್ಲದರ ನಡುವೆಯೂ ಒಕ್ಕಲಿಗರ ಮುಖಂಡರ ಸಭೆ ನಡೆದಿದ್ದು, ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಮಹದೇವಪ್ಪ ಅವರು ಸಮಯವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷ ಒಕ್ಕಲಿಗರನ್ನು ದತ್ತು ತೆಗೆದುಕೊಂಡಿಲ್ಲ. ಒಕ್ಕಲಿಗರು ಜೆಡಿಎಸ್ ಪಕ್ಷದ ಸ್ವತ್ತಲ್ಲ ಎಂದು ಹೇಳಿದರು.

ಜೆಡಿಎಸ್ ಪಕ್ಷ ಒಕ್ಕಲಿಗರ ಹೆಸರಿನಡಿ ಹಲವು ಬಾರಿ ಅಧಿಕಾರ ಅನುಭವಿಸಿದೆ. ಆದರೆ,ಒಕ್ಕಲಿಗರ ಮತದಿಂದ ಜೆಡಿಎಸ್ ಪಕ್ಷ ನಾಯಕರು ಬಲಿಷ್ಠ ವಾದರೂ ವಿನಃ ಜೆಡಿಎಸ್ ಪಕ್ಷದಿಂದ ಒಕ್ಕಲಿಗ ಜನಾಂಗದ ಏಳಿಗೆ ಆಗಲಿಲ್ಲ ಎಂದು ಆರೋಪಿಸಿದರು. ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಒಕ್ಕಲಿಗರ ಮತಕ್ಕಾಗಿ ಕಣ್ಣೀರು ಹಾಕುತ್ತಾರೆ. ರಾಜ್ಯಾದ್ಯಂತ ಒಕ್ಕಲಿಗರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಅವರು ಎಂದೂ ಕನಿಕರಪಡಲಿಲ್ಲ.

ಹೀಗಾಗಿ ರಾಜ್ಯದ ಎಲ್ಲ ಸಮುದಾಯದ ಏಳಿಗೆ ಕಾಂಗ್ರೆಸ್ ಪಕ್ಷದ ಮೂಲ ಧ್ಯೇಯವಾಗಿದೆ. ಜೆ ಡಿಎಸ್ ಎಂದರೆ ಒಕ್ಕಲಿಗ ಎಂದು ಹಾಲಿ ಶಾಸಕರು ಭ್ರಮೆಯಲ್ಲಿದ್ದಾರೆ. ಅವರ ಭ್ರಮೆಯನ್ನು ಅಳಿಸಿ ಈ ಭಾಗದ ಒಕ್ಕಲಿಗರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನ್ನನ್ನು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಮಾಜಿ ಶಾಸಕಿ ಜೆ. ಸುನೀತಾವೀರಪ್ಪಗೌಡ, ಮೈಮುಲ್ ನಿರ್ದೇಶಕ ಚೆಲುವರಾಜು,ಡಿಸಿಸಿ ವಕ್ತಾರ ಹುಣಸೂರು ಬಸವಣ್ಣ, ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಬಸವಣ್ಣ, ಯಾಚೇನಹಳ್ಳಿ ಶಂಕರೇಗೌಡ, ವೀಣಾ ಬೃಂದಾಕೃಷ್ಣೆಗೌಡ, ಕೇತುಪುರ ಪ್ರಭಾಕರ್, ಮಾಜಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಲಕ್ಷ್ಮಿನಾರಾಯಣ, ನರಸಿಂಹಮಾದನಾಯಕ, ವಜ್ರಗೌಡ, ಚಂದ್ರ ಇತರರು ಇದ್ದರು.


Spread the love