ಮಾಟ ಮಾಡಿದ ಹೆಂಡತಿ ಪೊಲೀಸ್ ಅತಿಥಿ

Spread the love

ಮಾಟ ಮಾಡಿದ ಹೆಂಡತಿ ಪೊಲೀಸ್ ಅತಿಥಿ

ಮೈಸೂರು: ಗಂಡನಿಂದ ದೂರವಾಗಿದ್ದ ಹೆಂಡತಿ ಪ್ರತಿ ಅಮಾವಾಸ್ಯೆಯಂದು ಮಾಟ ಮಂತ್ರ ಮಾಡಿ ಅದನ್ನು ಗಂಡನ ಮನೆ ಮುಂದೆ ಎಸೆದು ಹೋಗುತ್ತಿದ್ದಳು ಆದರೆ ಈ ಬಾರಿಯ ಅಮಾವಾಸ್ಯೆಯಂದು ಮಾಟ ಮಂತ್ರದ ಪದಾರ್ಥಗಳನ್ನು ಎಸೆಯುವಾಗ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ಘಟನೆ ಮೈಸೂರು ನಗರದ ವಿದ್ಯಾರಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಚನಹಳ್ಳಿ ಪಾಳ್ಯದಲ್ಲಿ ನಡೆದಿದೆ.

ನಸ್ರೀನ್ ಎಂಬ ಮಹಿಳೆಯೇ ಸಿಕ್ಕಿಬಿದ್ದವಳು. ಈಕೆ ನಾಚನಹಳ್ಳಿ ಪಾಳ್ಯದ 8ನೇ ಕ್ರಾಸ್‍ ನ ನಿವಾಸಿ ರಫಿ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೆಲವು ಸಮಯಗಳಿಂದ ಗಂಡನಿಂದ ದೂರವಾಗಿದ್ದಳು. ಹೀಗಾಗಿ ಆತನ ಮೇಲೆ ಮಾಟ ಮಂತ್ರ ಮಾಡುವ ಕಾರ್ಯಕ್ಕೆ ಕೈಹಾಕಿದ್ದಳು.

ಪ್ರತಿ ಅಮಾವಾಸ್ಯೆಯಂದು ಮಾಟಮಂತ್ರ ಮಾಡಿಸಿ ನಿಂಬೆಹಣ್ಣು ಮೆಣಸಿನಕಾಯಿ ಉಪ್ಪು ಸೇರಿದಂತೆ ಮಣ್ಣಿನ ಕುಡಿಕೆಯನ್ನು ರಫಿ ,ಮನೆ ಎದುರು ಎಸೆದು ಹೋಗುತ್ತಿದ್ದಳು. ಪ್ರತಿ ಬಾರಿಯೂ ಬೆಳಿಗ್ಗೆ ಎದ್ದು ನೋಡಿದಾಗ ಮನೆ ಮುಂದೆ ಮಾಟಮಂತ್ರದ ವಸ್ತುಗಳು ಬಿದ್ದಿರುತ್ತಿದ್ದವು. ಯಾರು ಇದನ್ನು ಎಸೆದು ಹೋಗುತ್ತಿದ್ದಾರೆ ಎಂಬುದು ಗೊತ್ತಾಗದೆ ಗೊಂದಲಕ್ಕೀಡಾಗಿದ್ದನು. ಈ ಬಾರಿ ಅದನ್ನು ಕಂಡು ಹಿಡಿಯಲು ರಾತ್ರಿ ಪೂರ್ತಿ ಕಾದು ಕುಳಿತಿದ್ದರು.

ಅದರಂತೆ ರಾತ್ರಿ ಸ್ಕೂಟರ್ ನಲ್ಲಿ ಬಂದ ಮಹಿಳೆ ಮನೆ ಮುಂದೆ ಮಾಟ ಮಂತ್ರದ ವಸ್ತುಗಳನ್ನು ಎಸೆಯುತ್ತಿದ್ದಂತೆಯೇ ಆಕೆಯನ್ನು ಸಾರ್ವಜನಿಕರ ನೆರವಿನಿಂದ ಹಿಡಿಯಲಾಗಿದ್ದು, ಆಕೆ ಪತ್ನಿ ನಸ್ರೀನ್ ಎಂಬುದು ಗೊತ್ತಾಗುತ್ತಿದ್ದಂತೆಯೇ ಗಂಡ ರಫಿ ಬೆಚ್ಚಿ ಬಿದ್ದಿದ್ದು, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


Spread the love