
ಮಾದಕ ವಸ್ತು ಸಾಗಾಟ/ಮಾರಾಟದ 3 ಪ್ರತ್ಯೇಕ ಪ್ರಕರಣ – ಮೂವರ ಬಂಧನ
ಮಾದಕ ವಸ್ತು ಸಾಗಾಟ/ಮಾರಾಟದ 3 ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
9,88,500 ಲಕ್ಷ ರೂ. ಮೌಲ್ಯದ ಗಾಂಜಾ ಸಾಗಾಟ ಪತ್ತೆ
ನಗರ ಹೊರವಲಯದ ನೀರುಮಾರ್ಗದ ಕುಟ್ಟಿಕಳ ಎಂಬಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಪೊಯ್ಯೆವಳಪ್ಪು ಮನೆ ನಿವಾಸಿ ಕಿರಣ್ ರಾಜ್ ಶೆಟ್ಟಿ(24) ಬಂಧಿತ ಆರೋಪಿ. ಈತನಿಂದ 27.100 ಕೆ.ಜಿ. ಗಾಂಜಾ, ಸಾಗಾಟಕ್ಕೆ ಬಳಸಿದ ಕಾರು, ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅವುಗಳ ಒಟ್ಟು ಮೌಲ್ಯ 9,88,500 ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.27ರಂದು ಆರೋಪಿಯು ಗಾಂಜಾವನ್ನು ಆಂಧ್ರ ಪ್ರದೇಶದ ವಿಶಾಖ ಪಟ್ಟಣದಿಂದ ಮಂಗಳೂರು ನಗರಕ್ಕೆ ಹಾಗೂ ಕೇರಳ ರಾಜ್ಯಕ್ಕೆ ಸಾಗಾಟಕ್ಕೆ ಯತ್ನಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್. ಎಂ., ಪಿಎಸ್ಸೈ ರಾಜೇಂದ್ರ ಬಿ. ನೇತೃತ್ವದ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಗಾಂಜಾ ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾವನ್ನು ಹೊಂದಿದ ಆರೋಪಿಯ ಸೆರೆ
ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಫ್ಲ್ಯಾಟ್ ವೊಂದಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಿಷೇಧಿತ ಮಾದಕ ವಸ್ತು ಗಾಂಜಾ ಹೊಂದಿದ್ದ ಆರೋಪದಲ್ಲಿ ಸಾಗರೋತ್ತರ ಭಾರತೀಯ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.
ನೀಲ್ ಕಿಶೋರಿಲಾಲ್ ರಾಮ್ ಜಿ ಶಾ(38) ಬಂಧಿತ ಆರೋಪಿ. ಈತನಿಂದ ಒಟ್ಟು 2 ಕೆ ಜಿ ತೂಕದ ರೂ. 50,000 ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, ನಗದು ರೂ.7000, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು ರೂ.78,000 ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲ್ಯಾಟ್ ವೊಂದರಲ್ಲಿ ಗಾಂಜಾವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ. ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಯು ಅಕ್ರಮವಾಗಿ ಮಾದಕ ವಸ್ತುಗಳನ್ನು ವಿಶಾಖಪಟ್ಟಣದಿಂದ ಖರೀದಿಸಿ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯ ಸೆರೆ
ಮುಡಿಪು ಪಂಚಾಯತ್ ಮೈದಾನ ಪರಿಸರದಲ್ಲಿ MDMA ಸಿಂಥೆಟಿಕ್ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುಡಿಪು ನಿವಾಸಿ ನವಾಝ್ ಅಲಿಯಾಸ್ ಮುಡಿಪು ನವಾಝ್(35) ಬಂಧಿತ ಆರೋಪಿ. ಈತನಿಂದ 15 ಗ್ರಾಂ ತೂಕದ ರೂ. 75,000 ಮೌಲ್ಯದ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ, 3200 ರೂ. ನಗದು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬೈಕ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳ ಒಟ್ಟು ಮೌಲ್ಯ ರೂ.1,13,700 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯು ಕೇರಳದ ಗಡಿಭಾಗ ಹಾಗೂ ಮುಡಿಪು ಪರಿಸರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕೊಣಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿ ನವಾಝ್ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ, ದರೋಡೆಗೆ ಸಂಬಂಧಪಟ್ಟಂತೆ ಒಟ್ಟು 8 ಪ್ರಕರಣಗಳು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ ಪ್ರಕರಣ ಹೀಗೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.