ಮಾದಕ ವಸ್ತು ಹೊಂದಿದ್ದ ಆರೋಪ; ಮೂವರ ಬಂಧನ

Spread the love

ಮಾದಕ ವಸ್ತು ಹೊಂದಿದ್ದ ಆರೋಪ; ಮೂವರ ಬಂಧನ
 

ಮಂಗಳೂರು: ಮಾದಕ ವಸ್ತು (ಎಂಡಿಎಂಎ) ಹೊಂದಿದ್ದ ಆರೋಪದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಉಳ್ಳಾಲ ಮೇಲಂಗಡಿಯ ಅಬ್ದುಲ್ ರಹ್ಮಾನ್ ಅರ್ಫಾನ್ ಯಾನೆ ಜಲ್ದಿ ಅರ್ಫಾನ್ (24), ಬೋಳೂರು ಬೊಕ್ಕಪಟ್ಣದ ಅಬ್ದುಲ್ ಜಲೀಲ್ (42), ಬೋಳಿಯಾರ್ ಕಾಪಿಕಾಡ್‌ನ ಮುಹಮ್ಮದ್ ಮನ್ಸೂರ್ (29)ಬಂಧಿತ ಆರೋಪಿಗಳು.

ಇವರಿಂದ 32 ಗ್ರಾಂ ತೂಕದ 1,62,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುಗಳು, 4 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನ, 22,000 ರೂ. ನಗದು ಹಾಗೂ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ 7,17,000 ರೂ. ಆಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆರೋಪಿಗಳು ಮಾದಕ ವಸ್ತುಗಳನ್ನು ಖರೀದಿಸಿಕೊಂಡು ದೇರಳಕಟ್ಟೆ, ಮುಡಿಪು, ನೆತ್ತಿಲಪದವು, ತಲಪಾಡಿ, ಉಳ್ಳಾಲ ಹಾಗೂ ಮಂಗಳೂರು ನಗರ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಷೇಧಿತ ಮಾದಕ ವಸ್ತುವನ್ನು ಕೇರಳದ ಗಡಿಭಾಗದ ಮೂಲಕ ಕಾರೊಂದರಲ್ಲಿ ನಗರಕ್ಕೆ ಮಾರಾಟ ಮಾಡಲು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಎಸ್ಸೈ ರಾಜೇಂದ್ರ ಬಿ. ಅವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ಸಮೀಪದ ದೇವಿಪುರ ರಸ್ತೆಯ ತಚ್ಚಾಣಿ ಬಳಿ ಕಾರನ್ನು ತಪಾಸಣೆ ಮಾಡಿ ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಅಬ್ದುಲ್ ರಹ್ಮಾನ್ ಅರ್ಫಾನ್ ಯಾನೆ ಜಲ್ದಿ ಅರ್ಫಾನ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ಅಬ್ದುಲ್ ಜಲೀಲ್ ಎಂಬಾತನ ವಿರುದ್ದ 1999ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಮನ್ಸೂರ್ ವಿರುದ್ಧ ಕೊಣಾಜೆ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


Spread the love