ಮಾದಕ ವ್ಯಸನದಿಂದ ಯುವಕರು ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ – ಬಸ್ರೂರು ಅಪ್ಪಣ್ಣ ಹೆಗ್ಡೆ

Spread the love

ಮಾದಕ ವ್ಯಸನದಿಂದ ಯುವಕರು ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ – ಬಸ್ರೂರು ಅಪ್ಪಣ್ಣ ಹೆಗ್ಡೆ

ಕುಂದಾಪುರ: ಗಾಂಜಾ‌ ಮುಂತಾದ ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದೆ ಯುವ ಸಮಾಜ ಕಾಣದ ಕೈಗಳ ಷಡ್ಯಂತ್ರಕ್ಕೆ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕರಾವಳಿಯ ಅತೀ ದೊಡ್ಡ ಜಾತ್ರೆ ಎನಿಸಿಕೊಂಡಿರುವ ಕೋಟೇಶ್ವರದ ಕೊಡಿ ಹಬ್ಬದ ಸಂದರ್ಭದ ಸಂಜೆಯ ಇಳಿಹೊತ್ತಿನಲ್ಲಿ ಪರಶಿವನ ಸಾನಿಧ್ಯದಿಂದ ಹೊರಟ ಈ ದೀವಟಿಗೆ ನಡಿಗೆ ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಯಶಸ್ಸು ಕಾಣಲಿ. ತನ್ಮೂಲಕ ವ್ಯಸನಮುಕ್ತ ಮಾತಾವರಣದಲ್ಲಿ ನಮ್ಮ ಮುಂದಿನ ಪೀಳಿಗೆ ಬೆಳಗುವಂತಾಗಲಿ ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

ಕೋಟೇಶ್ವರದ ರಥಬೀದಿಯಲ್ಲಿ ಶನಿವಾರ ಸಂಜೆ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಗಾಂಜಾ ವ್ಯಸನ ನಿರ್ಮೂಲನೆ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಜಾ ವಿರುದ್ದ ಜನಜಾಗೃತಿಗಾಗಿ ದೀವಟಿಗೆ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಜಾ ಮತ್ತು‌ ಡ್ರಗ್ಸ್ ಸೇವನೆಯಿಂದಾಗಿ ಇಂದು ನಮ್ಮ‌ ಯುವ ಸಮುದಾಯ ದಾರಿ‌ ತಪ್ಪುತ್ತಿದೆ. ಉತ್ತಮ ವಿದ್ಯಾಭ್ಯಾಸವನ್ನು ಬೇಕು ಎನ್ನುವ ಕಾರಣಕ್ಕೆ ಮಕ್ಕಳಿಗೆ ಬೇಕಾಗಿರುವ ಎಲ್ಲಾ ಅನುಕೂಲತೆಗಳನ್ನು‌ ಮಾಡಿಕೊಡುವ‌ ಪೋಷಕರು, ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ನಿಗಾ ವಯಸುವುದನ್ನೇ ಮರೆತು ಬಿಡುತ್ತಾರೆ. ಇದರ ಪರಿಣಾಮವೇ ಹದಿಹರಯದ ವಯಸ್ಸಿನವರಲ್ಲಿ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ‌. ಇದು ಪುಣ್ಯ ಭರತ ಭೂಮಿಗೆ ಹೀನವಾದ ವಿಚಾರ. ಈ ಗಾಂಜಾ ವ್ಯಸನದ ತಡೆಗಟ್ಟಲು ಸಮಾಜವೇ ಒಂದಾಗಬೇಕು. ಗಾಂಜಾ ವಿರುದ್ದ ಅಭಿಯಾನ ನಿಂತ‌ ನೀರಾಗದೆ ವಿಸ್ತಾರವಾಗಿ ಹೊರಡಬೇಕು. ಬೀದಿಗಳಲ್ಲಿ ನಡೆಯುವ ಇಂತಹ ದೀವಟಿಗೆ ನಡಿಗೆಯು ಒಂದಷ್ಟು ಜನರಲ್ಲಿ ಜಾಗೃತಿ ಮೂಡಿಸಿ, ಆತ್ಮ ಸ್ಥೈರ್ಯ ತುಂಬುವುದರಲ್ಲಿ ಸಂದೇಹವೇ ಇಲ್ಲ ಎಂದರು.

ಪಶ್ಚಿಮ ಘಟ್ಟಗಳ ಬುಡದಲ್ಲಿ ಗಾಂಜಾ ಬೆಳೆಸಲಾಗುತ್ತಿದೆ‌. ಹೊರಗಿನಿಂದ ಬಂದವರು ಬೆಳೆಗೆ ಪೂರಕವಾದ ವಾತಾವರಣ ಮಾಡಿ ಕೊಡುತ್ತಿದ್ದಾರೆ‌. ಗಾಂಜಾ ಬೆಳೆ ಬಗ್ಗೆ ಗಮನಕ್ಕೆ ಬಂದರೆ ಅದನ್ನು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಗಾಂಜಾ ಗಿಡಗಳು ಬೆಳೆಯದಂತೆ ನಾಶ ಮಾಡುವುದರ‌ ಮೂಲಕ‌ ನಮ್ಮ‌ ಮುಂದಿನ ಪೀಳಿಗೆ ಆರೋಗ್ಯವಂತರಾಗಿರುವಂತೆ ಜಾಗೃತೆ ವಹಿಸಬೇಕು ಎಂದರು.

ಜನಸೇವಾ ಟ್ರಸ್ಟ್ ನ ವಸಂತ ಗಿಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪತ್ರಕರ್ತ ಡಾ.ಸುಧಾಕರ ನಂಬಿಯಾರ್, ಉದ್ಯಮಿ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯ ಲೋಕೇಶ್ ಅಂಕದಕಟ್ಟೆ, ವಕೀಲ ಉಮೇಶ್ ಶೆಟ್ಟಿ ಶಾನ್ಕಟ್ಟು, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಕ್ವಾಡಿ ಪ್ರಭಾಕರ ಶೆಟ್ಟಿ, ಬೈಂದೂರು ಭಾರತ್ ಸೇವಾದಳದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದ ಕಟ್ಟೆ, ಪ್ರವೀಣ್ ಯಕ್ಷಿಮಠ್, ಉದಯಕುಮಾರ್ ಶೆಟ್ಟಿ ಪಡುಕೆರೆ ಇದ್ದರು.

ದೀವಟಿಗೆ ಹಿಡಿದುಕೊಂಡ ದೊಡ್ಡ ಸಂಖ್ಯೆಯ ಕಾರ್ಯಕರ್ತರು, ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಎನ್ನುವ ಘೋಷಣೆಯೊಂದಿಗೆ ಕೋಟೇಶ್ವರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಪತ್ರಕರ್ತ ರಾಜೇಶ್ ಕೆ.ಸಿ ನಿರೂಪಿಸಿದರು. ಉದಯ್ ಶೆಟ್ಟಿ ಪಡುಕೆರೆ ವಂದಿಸಿದರು.


Spread the love