ಮಾಧ್ಯಮಗಳಿಂದ ಸಲಹೆ ಕೊಡುವ ಕೆಲಸವಾಗಲಿ: ಮಾಧುಸ್ವಾಮಿ

Spread the love

ಮಾಧ್ಯಮಗಳಿಂದ ಸಲಹೆ ಕೊಡುವ ಕೆಲಸವಾಗಲಿ: ಮಾಧುಸ್ವಾಮಿ

ಬೆಂಗಳೂರು: ಟೀಕೆಗಳು ಮಾಡುವುದಷ್ಟೇ ಮಾಧ್ಯಮಗಳ ಕೆಲಸವೆಂದು ಪರಿಭಾವಿಸದೇ ಆಡಳಿತ ವ್ಯವಸ್ಥೆಗೆ ಸೂಕ್ತ ಸಲಹೆ-ಸೂಚನೆಗಳು, ಮಾರ್ಗದರ್ಶನ ಕೊಡುವ ಕೆಲಸಗಳು ಮಾಧ್ಯಮಗಳಿಂದಾಗಬೇಕು; ಇದು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಕಾನೂನು ಮತ್ತು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ “ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ” ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸರಕಾರಗಳು ಮತ್ತು ಆಡಳಿತ ವ್ಯವಸ್ಥೆ ತಪ್ಪು ಮಾಡಿದಲ್ಲಿ ಅವಹೇಳನ ಮಾಡದೇ ಅದನ್ನು ಅತ್ಯಂತ ನವೀರಾಗಿ ತಿದ್ದಿ ಹೇಳುವ ಕೆಲಸ ಮಾಧ್ಯಮಗಳು ಮಾಡಬೇಕು. ಇದುವರೆಗೆ ಏನಾಗಿದೆ; ಏನಾಗಬೇಕಾಗಿತ್ತು ಎನ್ನುವುದರ ಕುರಿತು ವಿಶ್ಲೇಷಣೆ ಮಾಡಿ ಸರಕಾರಗಳಿಗೆ ಚಾಟಿ ಬಿಸಿ ಎಚ್ಚರಿಸುವ ಕೆಲಸಗಳನ್ನು ಮಾಡಬೇಕು ಎಂದರು.

ರಾಷ್ಟ್ರ ನಿರ್ಮಾಣವೆಂದರೇ ಕೇವಲ ದೊಡ್ಡ ದೊಡ್ಡ ಕೈಗಾರಿಗಳ ಅಭಿವೃದ್ಧಿಯಲ್ಲ. ಜಾತಿ-ಮತ, ಪಂಥ, ಸಂಸ್ಕøತಿ ಸೇರಿದಂತೆ ವೈವಿಧ್ಯತೆಯನ್ನೇ ಜೀವಾಳವಾಗಿಸಿಕೊಂಡಿರುವ ಎಲ್ಲವನ್ನು ಮತ್ತು ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಮುನ್ನಡೆಯುತ್ತಾ ಎಲ್ಲ ರಂಗಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವುದಾಗಿದೆ. ನಿಷ್ಪಕ್ಷಪಾತ ವರದಿಗಾರಿಕೆ ಮತ್ತು ಮಾಧ್ಯಮಗಳ ವರದಿ ಹಾಗೂ ನಿರೀಕ್ಷೆಗಳ ಕುರಿತು ಸಹ ಅವರು ಮಾತನಾಡಿದರು.

ಹಿರಿಯ ಪತ್ರಕರ್ತರಾದ ರಾಜಾ ಶೈಲೇಶಚಂದ್ರಗುಪ್ತ ಅವರು ಮಾತನಾಡಿ, ಜನರ ಭಾವನೆಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಧ್ಯಮಗಳು ಮಾಡಬೇಕು. ಮಾಧ್ಯಮಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅವುಗಳು ಈಡೇರಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಲೋಪಗಳಾಗದೇ ನಿರೀಕ್ಷೆಗಳು ನಿಜವಾಗಿಸುವ ನಿಟ್ಟಿನಲ್ಲಿ ಎಂದರು.

ಹಿರಿಯ ಪತ್ರಕರ್ತರಾದ ಡಾ.ಆರ್.ಪೂರ್ಣಿಮಾ ಅವರು ಮಾತನಾಡಿ, ಭಾರತದಲ್ಲಿ ಪತ್ರಿಕಾರಂಗ ಹುಟ್ಟಿದ್ದೇ ರಾಷ್ಟ್ರೀಯ ಚಳವಳಿ ಸಂದರ್ಭದಲ್ಲಿ. ಸ್ವಾತಂತ್ರ್ಯ ಚಳವಳಿಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಮತ್ತು ಬ್ರಿಟೀಷರ ವಿರುದ್ಧ ಜನರು ಸಂಘಟಿತರಾಗಿ ಹೋರಾಟಕ್ಕಿಳಿಯುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದು. ಪತ್ರಿಕಾರಂಗವನ್ನು ರಾಷ್ಟ್ರೀಯ ಚಳವಳಿ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿತು ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಮಾತನಾಡಿ, ನೈತಿಕತೆ, ಮೌಲ್ಯಗಳನ್ನು ಉಳಿಸಿ ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದರು.

ಚಲನಚಿತ್ರ ನಟ ಅನಂತನಾಗ್ ಅವರು ಪ್ರಧಾನ ಭಾಷಣ ಮಾಡಿದರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿಗಳಾದ ಸಿ.ರೂಪಾ, ಸದಸ್ಯರಾದ ಶಿವಾನಂದ ತಗಡೂರು, ಕೆ.ಕೆ.ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ, ಕೂಡ್ಲಿ ಗುರುರಾಜ್, ಗೋಪಾಲ್ ಯಡಗೆರೆ, ಸಿ.ಕೆ.ಮಹೇಂದ್ರ, ಜಗನ್ನಾಥ ಬಾಳ, ಕೆ.ವಿ.ಶಿವಕುಮಾರ, ದೇವಿಂದ್ರಪ್ಪ ಕಪನೂರು, ನಾಗಾರ್ಜುನ ದ್ವಾರಕನಾಥ, ಲಕ್ಷ್ಮೀನಾರಾಯಣ ಎಸ್., ಬದ್ರುದ್ದೀನ್ ಕೆ., ಕೆ.ಎಂ.ಶಿವರಾಜು ಸೇರಿದಂತೆ ಹಿರಿಯ ಪತ್ರಕರ್ತರು ಇದ್ದರು.


Spread the love

Leave a Reply

Please enter your comment!
Please enter your name here