ಮಾಧ್ಯಮ ನಂಬಿಕೆ ಉಳಿಸಿಕೊಳ್ಳುವ ದಿನ ಮುಂದುವರಿಯಲಿ: ಸಹಾಯಕ ಆಯುಕ್ತೆ ರಶ್ಮಿ ಎಸ್ ಆರ್

Spread the love

ಮಾಧ್ಯಮ ನಂಬಿಕೆ ಉಳಿಸಿಕೊಳ್ಳುವ ದಿನ ಮುಂದುವರಿಯಲಿ: ಸಹಾಯಕ ಆಯುಕ್ತೆ ರಶ್ಮಿ ಎಸ್ ಆರ್

ಕುಂದಾಪುರ: ಮಾಧ್ಯಮಗಳಲ್ಲಿ ಬಂದ ಸುದ್ದಿಯೇ ಸತ್ಯ ಎಂದು ಜನ ನಂಬುತ್ತಾರೆ. ಸತ್ಯಶೋಧನೆ, ಸಾಮಾಜಿಕ ಸ್ಪಂದನೆ ಸೇರಿದಂತೆ ಜನರಿಗೆ ಅವಶ್ಯವುಳ್ಳ ಸುದ್ದಿಗಳ ಕಡೆಗೆ ಮಾಧ್ಯಮ ಗಮನ ಹರಿಸಿದರೆ ಸಮಾಜ ಹಾಗೂ ಮಾಧ್ಯಮದ ಬಾಂಧವ್ಯ ಉಳಿಯುತ್ತದೆ ಎಂದು ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಹೇಳಿದರು.

ಗ್ರಾಮೋಫೋನ್ ಬಳಸುವ ಮೂಲಕ ಉದ್ಘಾಟನೆ

ಸಾಮಾಜಿಕ ಜಾಲತಾಣ ಅನಾವರಣ

ಅವರು ಶುಕ್ರವಾರ ಭಂಡಾರ್ಕಾರ್ಸ್ ಕಾಲೇಜಿನ ಕೋಯಾಕುಟ್ಟಿ ಹಾಲ್ನಲ್ಲಿ ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಗ್ರಾಮೋಫೋನ್ ಬಳಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಜನರ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಪತ್ರಿಕೆಯಲ್ಲಿ ಬಂದ ಸುದ್ದಿಗಳನ್ನು ಓದುಗರು ಸತ್ಯ ಎಂದು ನಂಬುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ಮಾಹಿತಿ ನೀಡುವ ಜೊತೆ ಸತ್ಯವನ್ನು ಮುಟ್ಟಿಸುವ, ಜಾಗೃತಿ ಮೂಡಿಸುವ ಕೆಲಸ ಪತ್ರಿಕೆಯಿಂದ ಆಗುತ್ತದೆ ಎಂದರು.

ಕರಾವಳಿ ಜಿಲ್ಲೆಯ ಪತ್ರಿಕೋದ್ಯಮ ಉತ್ತಮ ತಳಹದಿಯ ಮೇಲೆ ಸಾಗುತ್ತಿದೆ. ಈ ಭಾಗದ ಪತ್ರಕರ್ತರು ಸುದ್ಧಿಯ ಬಗ್ಗೆ ಅಧ್ಯಯನ ಮಾಡಿ ಬಳಿಕವೇ ಅದನ್ನು ಪ್ರಕಟಿಸುತ್ತಾರೆ. ಇವತ್ತು ಸಾಕಷ್ಟು ಟಿವಿ ವಾಹಿನಿಗಳು, ಪತ್ರಿಕೆಗಳು ಬೆಳೆದು ಬಂದಿವೆ. ಪತ್ರಿಕೋದ್ಯಮ ಕ್ಷೇತ್ರ ಇಷ್ಟೊಂದು ವೇಗವಾಗಿ ಬೆಳೆಯಲು ಜನರು ಈ ಕ್ಷೇತ್ರದ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣ ಎಂದರು.

ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ನಿಗಾಕ್ಕೆಂದೇ ವಿಶೇಷ ಅಧಿಕಾರಿಗಳನ್ನು ನಿಯೋಜಿಸಬೇಕಾದ ಸಂದರ್ಭಗಳು ಬಂದಿವೆ. ಮಾಧ್ಯಗಳು ಹೇಳಿದ್ದನ್ನು ಎಲ್ಲವೂ ಸತ್ಯ ಎಂದು ಜನ ನಂಬುವ ಕಾಲದಿಂದ ಯಾವುದು ಪಾವತಿ ಸುದ್ದಿ ಯಾವುದು ನಿಖರ ಸುದ್ದಿ ಎಂದು ಪತ್ತೆ ಹಚ್ಚಬೇಕಾದ ಸಂದಿಗ್ಧ ಸ್ಥಿತಿ ಬಂದಿದೆ. ಮಾಧ್ಯಮ ನಂಬಿಕೆ ಉಳಿಸಿಕೊಳ್ಳುವ ದಿನಗಳು ಮುಂದುವರಿಯಲಿ ಎಂದು ಹೇಳಿದರು.

ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಸಾಮಾಜಿಕ ಜಾಲತಾಣ ಅನಾವರಣ ಮಾಡಿ ಮಾತನಾಡಿ, ಪತ್ರಿಕಾ ಧರ್ಮ ಹೋಗಿ ಉದ್ಯಮವಾಗಿ ಬದಲಾಗಿದ್ದು, ಪತ್ರಕರ್ತರು ಹೆಚ್ಚು ಹೆಚ್ಚು ಓದಿ, ಜ್ಞಾನ ವೃದ್ಧಿಸಿಕೊಂಡು ತಪ್ಪುಗಳನ್ನು ಸಮಾಜದ ಮುಂದೆ ತೆರೆದಿಟ್ಟು ಸಮಾಜ ಸರಿದಾಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿಯಿದೆ. ಪೊಲೀಸರ ತಪ್ಪುಗಳನ್ನು ಎತ್ತಿತೋರಿಸಿದರೆ ತಪ್ಪು ತಿದ್ದಿಕೊಂಡು ಕೆಲಸ ಮಾಡಲು ಸಾಧ್ಯವಿದ್ದು, ಪೊಲೀಸ್ ಮತ್ತು ಪತ್ರಕರ್ತರು ಒಟ್ಟಾಗಿ ಸಮಾಜದ ಸೌಖ್ಯ ಕಾಪಾಡುವ ಕೆಲಸ ಮಾಡುವ ಎಂದ ಅವರು, ನಾನು ಕೂಡಾ ಕೊಡಗು ದೈನಿಕ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ ಎಂದರು

ವಿಜಯ ಕರ್ನಾಟಕ ನಿವೃತ್ತ ಸ್ಥಾನೀಯ ಸಂಪಾದಕ ಯು.ಕೆ. ಕುಮಾರನಾಥ್ ಉಪನ್ಯಾಸ ನೀಡಿ, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಕೇವಲ ವರದಿಗಾರಿಕೆಯಷ್ಟೇ ಪತ್ರಿಕೆಯ ಕೆಲಸವಾಗಿ ಉಳಿದಿಲ್ಲ. ಅಭಿಯಾನಗಳ ಮೂಲಕ ಜನರಲ್ಲಿ ಬೆರಗು ಹುಟ್ಟಿಸಬೇಕು, ಸಮಾಜದಲ್ಲಿ ಪರಿವರ್ತನೆ ತರಬೇಕು ಎಂದರು.

ಹಿರಿಯ ಪತ್ರಕರ್ತ ಜನಾರ್ದನ ಎಸ್. ಮರವಂತೆ, ಪತ್ರಿಕೆಗಳ ನಿಷ್ಪಕ್ಷಪಾತ ವರದಿಗಾರಿಕೆ ಕುರಿತು ನೀಡುವ ಜಾಗತಿಕ ರ್ಯಾಂಕಿಂಗ್ನಲ್ಲಿ ಭಾರತ 180ರಲ್ಲಿ 161ನೇ ಸ್ಥಾನದಲ್ಲಿದೆ. ಇದು ಸಮಾಜದ ಮೇಲೆ ವಿಭಜಿಸುವ ಪರಿಣಾಮ ಬೀರದೇ ಇರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ|ಜಿ.ಎಂ.ಗೊಂಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಜಿಲ್ಲಾ ರಜತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ತಾಲೂಕು ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ, ತಾಲೂಕು ಉಪಾಧ್ಯಕ್ಷ ಚಂದ್ರಮ ತಲ್ಲೂರು, ಸಂಘದ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿನಿಯರಾದ ಸೌಜನ್ಯ, ದೀಕ್ಷಿತಾ, ದೀಕ್ಷಿತಾ ಪ್ರಾರ್ಥಿಸಿದರು. ತಾಲೂಕು ಪತ್ರಕರ್ತ ಸಂಘ ಮಾಜಿ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿದರು. ಪತ್ರಕರ್ತ ಪ್ರಶಾಂತ ಪಾದೆ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ನಿರೂಪಿಸಿದರು. ಕಾರ್ಯದರ್ಶಿ ಗಣೇಶ್ ಬೀಜಾಡಿ ವಂದಿಸಿದರು.


Spread the love