Home Mangalorean News Kannada News ಮಾನಸಿಕ ಖಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬೇಕು: ಜೈಬುನ್ನಿಸಾ

ಮಾನಸಿಕ ಖಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬೇಕು: ಜೈಬುನ್ನಿಸಾ

Spread the love

ಮಾನಸಿಕ ಖಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬೇಕು: ಜೈಬುನ್ನಿಸಾ

ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜು ಕಂಕನಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2025 ಕಾರ್ಯಕ್ರಮ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೆಸಿನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾನಸಿಕ ಆರೋಗ್ಯ ಕಾರ್ಯಕ್ರಮ ಮಾನಸಿಕ ರೋಗಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಾಯ್ದೆಗಳಲ್ಲಿರುವ ಕಾನೂನಿನ ತೊಡಕನ್ನು ಎದುರಿಸಿ ಮಾನಸಿಕ ಕಾಯಿಲೆಯ ಬಗ್ಗೆ ಅರಿವು ಮೂಡಿಸುವುದಾಗಿದೆ. ಪ್ರತಿಯೊಬ್ಬ ಮಾನವನಿಗೆ ಸಮಾಜದಲ್ಲಿ ಜೀವಿಸುವ ಹಕ್ಕಿದೆ. ಜೀವಿಸುವ ಸಮಯದಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕು, ವ್ಯಕ್ತಿಯ ಗೌರವಕ್ಕೆ ಚ್ಯುತಿ ಬಾರದಂತೆ ನಾವು ಸಮಾದಲ್ಲಿ ತೊಡಗಿಸಬೇಕು. ಮಾನಸಿಕ ಖಾಯಿಲೆಗಳನ್ನು ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ/ ಸಮಾಲೋಚನೆ ಮೂಲಕ ಮಾನಸಿಕ ಕಾಯಿಲೆಯಿಂದ ಮುಕ್ತರನ್ನಾಗಿಸಬೇಕು. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ವಿಭಾಗದ ಮೂಲಕ ಮಾನಸಿಕ ಕಾಯಿಲೆಗಳ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಮಾತನಾಡಿ, ದಿನದಿಂದ ದಿನಕ್ಕೆ ಯುವಜನತೆ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಹವ್ಯಾಸಗಳಿಗೆ ಬಲಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗುವುದು ಸರ್ವೆ ಸಾಮಾನ್ಯ. ಇಂದಿನ ಶಿಕ್ಷಣ ಕೇವಲ ಅಂಕ ಪಡೆಯುವುದಕ್ಕೆ ಸೀಮಿತವಾಗಿದ್ದು, ಹೊರಗಿನ ಪ್ರಪಂಚದ ಪರಿಜ್ಞಾನವಿಲ್ಲದೆ ಮೊಬೈಲ್ ಬಳಕೆ ಮೂಲಕ ಹೊಸ ಹೊಸ ಸಾಹಸಕ್ಕೆ ಒಳಗಾಗುವುದು ಕಂಡುಬರುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಫಾದರ್ ಮುಲ್ಲರ್ ನಿರ್ದೇಶಕ ರೇ. ಫಾದರ್ ಫಾಸ್ಟಿನ್ ಲೂಕಸ್ ಲೋಬೋ ಮಾತನಾಡಿ, ಈಗಿನ ವ್ಯವಸ್ಥೆಯಲ್ಲಿ ಜನರು ಒಂದಲ್ಲ ಒಂದು ರೀತಿಯ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಂದಿನ ಯುಜನತೆ ಸೋಮಾರಿತನ ಸ್ವಭಾವದೊಂದಿಗೆ ಯಾಂತ್ರಿಕ ಜೀವನವನ್ನು ನಡೆಸುವ ಮೂಲಕ ಫಾಸ್ಟ್ ಫುಡ್, ಹೊರಗಿನ ಆಹಾರ ಪದ್ಧತಿಗಳಿಗೆ ಜೀವನವನ್ನು ತೊಡಗಿಸಿಕೊಂಡಿದ್ದಾರೆ. ಓದುವ ಹವ್ಯಾಸವನ್ನು ಬಿಟ್ಟು, ಇಂಟರ್‍ನೆಟ್ ಜೀವನಕ್ಕೆ ಹೊಂದಿಕೊಂಡು ಅಮೂಲ್ಯವಾದ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಮಾನಸಿಕ ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆ/ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ದಿನದಿನ ಹೆಚ್ಚಾಗುತ್ತಿವೆ. ಒತ್ತಡ ಮುಕ್ತ ಜೀವನ ನಮ್ಮದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಡಾ.ಸುದರ್ಶನ್ ಕಾರ್ಯಕ್ರಮ ಅಧಿಕಾರಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ.ಮೈಕಲ್ ಸಾಂತು ಮಯೂರ್, ಮನೊರೋಗ ತಜ್ಞೆ ಡಾ.ಪ್ರಜಕ್ತಾ ವಿ ರಾವ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಾಹುಲ್ ಎಮ್.ರಾವ್ ಇದ್ದರು.

ಸಂಸ್ಥೆಯ ಪ್ರಾಧ್ಯಾಪಕಿ ಡಾ.ಸುಪ್ರಿಯಾ ಹೆಗ್ಡೆ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳ್ಳೆಪಾಡಿ ವಂದಿಸಿದರು.


Spread the love

Exit mobile version