
ಮಾನಸ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ
ಕುಂದಾಪುರ: ಭಗವಂತನ ಸೃಷ್ಟಿಯ ಲೀಲೆಗಳನ್ನು ಊಹೆ ಮಾಡಲು ಅಥವಾ ಭವಿಷ್ಯವನ್ನು ಅಂದಾಜಿಸಲು ನಮ್ಮಿಂದ ಸಾಧ್ಯವಿಲ್ಲ. ಸೃಷ್ಟಿಯ ಪ್ರತಿಯೊಂದರಲ್ಲಿಯೂ ವಿಶೇಷತೆ ಹಾಗೂ ವೈಶಿಷ್ಟ್ಯವಿದೆ. ಜಗತ್ತಿನ ಆಗು-ಹೋಗುಗಳ ಗೊಡವೆ ಇಲ್ಲದೆ ನಮ್ಮ ನಡುವೆ ಮುಗ್ದತೆಯಿಂದ ಇರುವ ವಿಶೇಷ ಚೇತನರರನ್ನು ಆರೈಕೆ ಮಾಡಿ ಬೆಳೆಸುವುದಕ್ಕಿಂತ ಪುಣ್ಯ ಕಾರ್ಯ ಬೇರೊಂದಿಲ್ಲ. ಇಂತಹ ಪುಣ್ಯ ಕಾರ್ಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಭಾಗಿಯಾಗಿರುವ ಶೋಭಾ ಮಧ್ಯಸ್ಥ ಹಾಗೂ ಅವರ ತಂಡದವರು ನಿಜಕ್ಕೂ ಪ್ರಾತ: ಸ್ಮರಣೀಯರು ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಇಲ್ಲಿನ ಸಮೀಪದ ಕೋಣಿಯಲ್ಲಿನ ವಿಶೇಷ ಚೇತನ ಮಕ್ಕಳ ಶಾಲೆ ‘ ಮಾನಸ ಜ್ಯೋತಿ’ ಗೆ ಸೋಮವಾರ ಭೇಟಿ ನೀಡಿ, ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ಹಣ್ಣುಗಳನ್ನು ನೀಡಿ ಕುಶಲೋಪರಿ ನಡೆಸುವ ಮೂಲಕ ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು, ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
ಮಾನಸ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಯ ಮುಖ್ಯಸ್ಥೆ ಶೋಭಾ ಮಧ್ಯಸ್ಥ ಅವರು ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶ, ವಿಶೇಷ ಚೇತನ ಮಕ್ಕಳಿಗೆ ಸಂಸ್ಥೆಯಲ್ಲಿ ನೀಡುವ ಆರೈಕೆ, ಪಠ್ಯಕ್ರಮ, ದಾನಿಗಳ ನೆರವಿನ ಬಗ್ಗೆ ಮಾಹಿತಿಗಳನ್ನು ನೀಡಿದರಲ್ಲದೆ , ಸಂಸ್ಥೆಯಲ್ಲಿ ಮಕ್ಕಳಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ಮನಸ್ಸಿನಿಂದ ದಾನಿಗಳು ನೀಡುವ ಕೊಡುಗೆಗಳನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತಿರುವುದಾಗಿ ತಿಳಿಸಿದರು. ಇದೇ ಸಂಸದರ್ಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು, ಮಕ್ಕಳ ಊಟೋಪಚಾರಕ್ಕಾಗಿ ಸಹಾಯಧನ ನೀಡಿದರು.
ಕುಂದಾಪುರ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಆಶೋಕ ಪೂಜಾರಿ ಬೀಜಾಡಿ, ಕೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಭಂಡಾರಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ, ಪ್ರಮುಖರಾದ ಹರೀಶ್ ತೋಳಾರ್ ಕೊಲ್ಲೂರು, ಪ್ರಶಾಂತ ಪೂಜಾರಿ ಕರ್ಕಿ, ಮಂಜುನಾಥ ಪೂಜಾರಿ ಕಟ್‌ಬೇಲ್ತೂರು, ಸುರೇಶ್ ಜೋಗಿ ನಾಗೂರು, ರಾಜೇಶ್ ದೇವಾಡಿಗ ಖಂಬದಕೋಣೆ ಮುಂತಾದವರಿದ್ದರು.