ಮಾರ್ಚ್ – 10: ಮದರ್ ತೆರೇಸಾ ವಿಚಾರ ವೇದಿಕೆಯಿಂದ ಸೌಹಾರ್ದ ಇಫ್ತಾರ್ ಕೂಟ
ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ,ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ,ರಂಜಾನ್ ಹಬ್ಬದ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟವನ್ನು ತಾ.10-03-2026ರಂದು ಸಂಜೆ 5.15ಕ್ಕೆ ಬಾವುಟಗುಡ್ಡದಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ ಮಸ್ಜಿದ್ ನ ಧರ್ಮಗುರುಗಳಾದ ಮೌಲಾನಾ ಯು ಕೆ ಅಬ್ದುಲ್ ಅಜೀಜ್ ದಾರಿಮಿ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಸಹ ಉಪಕುಲಪತಿಗಳಾದ ಡಾ.ಮೆಲ್ವಿನ್ ಡಿ ಕುನ್ನಾ SJ, ನಾಡಿನ ಹಿರಿಯ ಸಾಹಿತಿಗಳೂ, ನಿವೃತ್ತ ಶಿಕ್ಷಕರಾದ ಬಿ ಎಂ ರೋಹಿಣಿ, ಬಾವುಟಗುಡ್ಡ ಝೀನತ್ ಭಕ್ಷ್ ಜುಮಾ ಮಸ್ಜಿದ್ ನ ಉಪಾಧ್ಯಕ್ಷರಾದ ಕೆ ಆಶ್ರಫ್ ರವರು ಭಾಗವಹಿಸಿ, ಸೌಹಾರ್ದ ಸಂದೇಶಗಳನ್ನು ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಲಿದ್ದಾರೆ.
_ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ಕಳೆದ 8 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದಿರುವ ಮದರ್ ತೆರೇಸಾರವರ ವಿಚಾರಧಾರೆಯನ್ನು ಕೂಡ ವಿದ್ಯಾರ್ಥಿ ಯುವಜನರ ಮಧ್ಯೆ ಕೊಂಡೊಯ್ಯುವ ಮೂಲಕ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ.ಪ್ರತಿಯೊಂದು ಧರ್ಮದ ಹಬ್ಬಗಳನ್ನು ಸರ್ವ ಧರ್ಮದ ಜನತೆ ಒಗ್ಗೂಡಿ ಆಚರಿಸಿದಾಗ ಮಾತ್ರವೇ ಸೌಹಾರ್ದತೆ ಬಲಗೊಳ್ಳಲು ಸಾಧ್ಯವೆಂದು ಅರಿತ ವೇದಿಕೆಯು ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜಿಸಿದೆ.ಇಂತಹ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಸರ್ವ ಧರ್ಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆಯ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಂಗಳೂರಿನ ಜನತೆಯಲ್ಲಿ ಮನವಿಯನ್ನು ಮಾಡಿದ್ದಾರೆ.
