ಮಾರ್ಬಲ್ ಇಳಿಸುವ ವೇಳೆ ದುರಂತ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

Spread the love

ಮಾರ್ಬಲ್ ಇಳಿಸುವ ವೇಳೆ ದುರಂತ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

ಕುಂದಾಪುರ: ಖಾಸಗಿ ರೆಸಾರ್ಟ್‍ವೊಂದರ ಕಾಮಗಾರಿಗಾಗಿ ಲಾರಿ ಮೂಲಕ ತಂದಿದ್ದ ಮಾರ್ಬಲ್ ಅನ್ನು ಇಳಿಸುವ ವೇಳೆ ನಡೆದ ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಪಶ್ಚಿಮ ಬಂಗಾಲ ಮೂಲದ ಗಣಪತಿ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಓರ್ವ ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಸಮೀಪದ ಕಂಚುಗೋಡು ಬೀಚ್ ಬಳಿ ಖಾಸಗಿ ರೆಸಾರ್ಟ್‍ವೊಂದರ ಕಾಮಗಾರಿಗಾಗಿ ಪಶ್ಚಿಮ ಬಂಗಾಳದಿಂದ ಲಾರಿಯಲ್ಲಿ ಮಾರ್ಬಲ್‍ಗಳನ್ನು ತರಿಸಲಾಗಿತ್ತು. ಬೃಹತ್ ಸರಕು ಆಗಿರುವುದರಿಂದ ಬುಧವಾರದಿಂದಲೇ 5-6 ಮಂದಿಯ ತಂಡವು ಲಾರಿಯಿಂದ ಮಾರ್ಬಲ್‍ಗಳನ್ನು ಇಳಿಸುತ್ತಿದ್ದರು. ಗುರುವಾರ ಸಂಜೆ ವೇಳೆಗೆ ಅರ್ಧದಷ್ಟು ಇಳಿಸಿ ಆಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಇಳಿಸುತ್ತಿರುವ ವೇಳೆ ಮೂವರ ಮೇಲೆ ಬೃಹತ್ ಮಾರ್ಬಲ್ ಮೇಲೆ ಬಿದ್ದಿದೆ. ಮಾರ್ಬಲ್ ಅಡಿಗೆ ಬಿದ್ದವರನ್ನು ಕೂಡಲೇ ಸ್ಥಳೀಯರೆಲ್ಲ ರಕ್ಷಿಸಲು ಪ್ರಯತ್ನಿಸಿದರಾದರೂ ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಗಂಭೀರ ಗಾಯಗೊಂಡ ಗಣಪತಿ ಕೊನೆಯುಸಿರೆಳೆದಿದ್ದಾರೆ.

ಗಂಗೊಳ್ಳಿಯ ಆಪತ್ಭಾಂಧವ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.

ಗಂಗೊಳ್ಳಿ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.


Spread the love