
ಮಾಲೀಕರು ಸಿಬ್ಬಂದಿಗಳಿಗೆ ಕಡ್ಡಾಯ ಲಸಿಕೆ ಹಾಕಿಸಿ: ಡಿಸಿ ಎಸ್.ಅಶ್ವತಿ
ಮಂಡ್ಯ: ಜಿಲ್ಲೆಯಲ್ಲಿನ ಕೈಗಾರಿಕೋದ್ಯಮಿಗಳು ಮತ್ತು ಇತರೆ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮತ್ತು ಕಾರ್ಮಿಕರಿಗೆ ಶೀಘ್ರದಲ್ಲಿಯೇ ಕೋವಿಡ್ ಮೊದಲನೇ ಮತ್ತು ಎರಡನೇ ಡೋಸ್ ನ್ನು ನೀಡಿ ಅವರ ಜೀವವನ್ನು ರಕ್ಷಿಸಿ ಮತ್ತು ಕೋವಿಡ್ ಮೂರನೇ ಅಲೆ ತಡೆಗಟ್ಟುವಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿರವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಕೈಗಾರಿಕೆಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಇತರೆ ಇಲಾಖೆಗಳ ಸಹಯೋಗದೊಂದಿಗೆ ಸಿಎಸ್ಆರ್ ಚಟುವಟಿಕೆಯಲ್ಲಿ ಲಸಿಕಾಕರಣ ನಡೆಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು ಉದ್ಯಮಿಗಳು ತಮ್ಮ ಸಂಸ್ಥೆಯ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಶೇಕಡ ನೂರರಷ್ಟು ಲಸಿಕೆಯನ್ನು ನೀಡಿ ಕೊರೋನಾ ತಡೆಗಟ್ಟುವಲ್ಲಿ ಸಹಕರಿಸಿ ಎಂದರು.
ಜಿಲ್ಲೆಯಲ್ಲಿ ಒಟ್ಟು 18 ಲಕ್ಷ ಜನಸಂಖ್ಯೆ ಇದ್ದು, ಈಗಾಗಲೇ 9.70 ಲಕ್ಷ ಜನರಿಗೆ ಲಸಿಕೆಯನ್ನು ನೀಡಲಾಗಿದೆ . ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಶೇ. 70ರಷ್ಟು ಲಸಿಕಾಕರಣದ ಅಗತ್ಯವಿದೆ. ಆದ್ದರಿಂದ ಕೈಗಾರಿಕೋದ್ಯಮಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಕಾರ್ಮಿಕರಿಗೆ ಲಸಿಕೆ ನೀಡುವಲ್ಲಿ ಸಹಕರಿಸಬೇಕು. ಬೆಂಗಳೂರಿನಲ್ಲಿ ಕೈಗಾರಿಕೋದ್ಯಮಿಗಳು, ಇತರೆ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೋವಿಡ್ ಲಸಿಕಾಕರಣಕ್ಕೆ ಆದ್ಯತೆ ನೀಡಿದ್ದಾರೆ. ಅದೇ ರೀತಿ ಮಂಡ್ಯದಲ್ಲಿರುವಂತಹ ಕೈಗಾರಿಕೋದ್ಯಮಗಳು ಲಸಿಕೆಯನ್ನು ನೀಡಿ ಮೂರನೇ ಅಲೆ ತಡೆಗಟ್ಟುವಲ್ಲಿ ಸರ್ಕಾರ ಜೊತೆ ಕೈಜೋಡಿಸಿ. ಜಿಲ್ಲೆಯಲ್ಲಿನ ಉದ್ಯಮಿಗಳು ಕೋವಿಡ್ ಸಂದರ್ಭದಲ್ಲಿ ಮಾಸ್ಕ್ಗಳು, ಆಹಾರಕಿಟ್ಗಳು ನೀಡುವುದರ ಜೊತೆಗೆ ನಿಮ್ಮ ಸಿಬ್ಬಂದಿ ಮತ್ತು ಕಾರ್ಮಿಕರುಗಳಿಗೆ ಕೋವಿಡ್ ಲಸಿಕೆಯನ್ನು ನೀಡಿ ಅವರ ಪ್ರಾಣವನ್ನು ಉಳಿಸಿ ಎಂದರು.
ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿನ ಕೈಗಾರಿಕೆಗಳು ಉದ್ಯಮ ಸ್ಥಗಿತವಾಗಬಾರದು ಎಂಬ ಉದ್ದೇಶದಿಂದ ಕೈಗಾರಿಕೆಗಳ ಕಾರ್ಯಕ್ಕೆ ಅನುಮತಿ ನೀಡಲಾಗಿದೆ ಆದ್ದರಿಂದ ನೀವು ನಿಮ್ಮ ಕಾರ್ಮಿಕರ ಹಿತರಕ್ಷಣೆಯನ್ನು ಅರಿತು ಕೂಡಲೇ ಲಸಿಕಾಕರಣಕ್ಕೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿನ ಮಹಿಳಾ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಒಕ್ಕೂಟಗಳು ಹಾಗೂ ಅವರ ಕುಟುಂಬದವರಿಗೆ ಕೋವಿಡ್ ಲಸಿಕೆ ನೀಡಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜುಮೂರ್ತಿಯವರಿಗೆ ತಿಳಿಸಿದರು.
ಸರ್ಕಾರದಿಂದ ನಿರಂತರವಾಗಿ ಲಸಿಕೆಯನ್ನು ನೀಡಲಾಗುತ್ತಿದೆ ಅದರ ಜೊತೆಗೆ ಜಿಲ್ಲೆಯಲ್ಲಿನ ಹಣಕಾಸು ಸಂಸ್ಥೆಗಳು, ಸಂಘ-ಸಂಸ್ಥೆಗಳು, ಕೈಗಾರಿಕೆ ಸಂಸ್ಥೆಗಳು ಮತ್ತು ಇತರೆ ಖಾಸಗಿ ಕಂಪನಿಗಳು ಅಗಸ್ಟ್ 20 ರೊಳಗೆ ತಮ್ಮ ಸಿಬ್ಬಂದಿ ಮತ್ತು ಕಾರ್ಮಿಕರುಗಳಿಗೆ ಲಸಿಕೆಯನ್ನು ನೀಡಿ ಸರಿಯಾದ ಅಂಕಿಅಂಶಗಳನ್ನು ತಿಳಿಸುವಂತೆ ಸೂಚಿಸಿದರು.