ಮಾವಜೋ ಗೋವಾದ ಸಮ್ಮಿಶ್ರ ಸಂಸ್ಕೃತಿಯ ಪ್ರತೀಕ – ಡಾ| ಎಂ. ಪ್ರಭಾಕರ ಜೋಶಿ

Spread the love

ಮಾವಜೋ ಗೋವಾದ ಸಮ್ಮಿಶ್ರ ಸಂಸ್ಕೃತಿಯ ಪ್ರತೀಕ – ಡಾ| ಎಂ. ಪ್ರಭಾಕರ ಜೋಶಿ

“ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ್ ಮಾವಜೋ, ತಮ್ಮ ಬರವಣಿಗೆಯಲ್ಲಿ ಸಂಕೀರ್ಣತೆ ಮತ್ತು ಸರಳತೆ ಎರಡನ್ನೂ ಸಮಾನವಾಗಿ ಹಿಡಿದಿಟ್ಟು ಸಾಮಾನ್ಯ ಓದುಗರು ಹಾಗೂ ವಿದ್ವಾಂಸವರ್ಗಕ್ಕೆ ತಲುಪುವಲ್ಲಿ ಸಫಲರಾಗಿರುವ ವಿರಳ ಲೇಖಕರಲ್ಲಿ ಒಬ್ಬರು. ಗೋವಾದ ಸಮ್ಮಿಶ್ರ ಸಂಸ್ಕೃತಿಯನ್ನುತಮ್ಮ ಬರವಣಿಗೆಯಲ್ಲಿ ಕಟ್ಟಿ ಕೊಡುವ ಜೊತೆಗೆ, ತಮ್ಮ ಬರವಣಿಗೆಯಲ್ಲಿ ಪ್ರತಿಪಾದಿಸುತ್ತಿರುವ ಮೌಲ್ಯಗಳನ್ನು ಜೀವನದಲ್ಲೂ ಅಳವಡಿಸಿಕೊಂಡು ಬದುಕುತ್ತಿರುವ ಮಹಾನ್ ಚೇತನ. ತಮ್ಮ ಬರವಣಿಗೆಯಲ್ಲಿ ಕೊಂಕಣಿ ಸಮಾಜದ ಅಸ್ಮಿತೆ ಮತ್ತು ವಿಶೇಷತೆಯನ್ನು ಪರಿಣಾಮಕಾರಿಯಾಗಿ ಅವರು ಹಿಡಿದಿಟ್ಟಿದ್ದಾರೆ” ಎಂದು ವಿಶ್ರಾಂತ ಪ್ರಾಧ್ಯಾಪಕ, ಪ್ರಖರ ಚಿಂತಕ ಮತ್ತು ಖ್ಯಾತ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರು ಅಭಿಪ್ರಾಯಪಟ್ಟರು.

ಡಾ| ಜೋಶಿ, ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಕೀರ್ತಿ ಮಂದಿರದಲ್ಲಿ, ಮಂಗಳವಾರ ದಿನಾಂಕ 24 ಆಗಸ್ಟ್ 2022 ರಂದು ಜ್ಞಾನಪೀಠ ಪುರಸ್ಕೃತ ಕೊಂಕಣಿ ಸಾಹಿತಿ ದಾಮೋದರ ಮಾವಜೋ ಅವರ ತೈಲವರ್ಣಚಿತರ್ವನ್ನು ಅನಾವರಣಗೊಳಿಸಿ ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಮಾವಜೋ ದಂಪತಿ ಹಾಜರಿದ್ದು, ದಾಮೋದರ ಮಾವ್ಜೋ ಅವರು, ” ವಿಶ್ವ ಕೊಂಕಣಿ ಕೇಂದ್ರವನ್ನು ಬಸ್ತಿ ವಾಮನ ಶೆಣೈ ನೆನಪಿಗೆ ವಾಮನ ವನ ಎಂದು ನಾಮಕರಣ ಮಾಡಬೇಕೆಂದು ಇಂದಿನ ಮುಖ್ಯ ಅತಿಥಿ ಡಾ| ಜೋಶಿಯವರು ಪ್ರಸ್ತಾಪಿಸಿದ್ದು ಸಮಂಜಸವೇ ಇದೆ. ನಮಗೆ ವಿಶ್ವ ಕೊಂಕಣಿ ಮತ್ತು ಬಸ್ತಿ ವಾಮನ ಶೆಣೈ ಎರಡೂ ಒಂದೇ. ತಮಗೆ ಗೋವಾ ತವರೂರು ಇದ್ದಂತೆ ನಮಗೆ ವಿಶ್ವ ಕೊಂಕಣಿ ಕೇಂದ್ರ ಎರಡನೇ ಮನೆ ಇದ್ದಂತೆ. ನನ್ನದೇ ಮನೆಯ ಕೀರ್ತಿ ಮಂದಿರದಲ್ಲಿ ನನಗೆ ಲಭಿಸಿದ ಗೌರವವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ” ಎಂದು ದಾಮೋದರ ಮಾವಜೋ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ಸ್ವಾಗತಿಸಿದರು. ಕೊಂಕಣಿ ಕವಿ ಮತ್ತು ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿ ಮೆಲ್ವಿನ್ ರೊಡ್ರಿಗಸ್ ನಿರೂಪಿಸಿದರು. ಕಾರ್ಯದರ್ಶಿ ಸಿ.ಎ. ಗಿರಿಧರ ಕಾಮತ್ ವಂದಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿ’ಸೊಜಾ, ಕೋಶಾಧಿಕಾರಿ ಬಿ. ಆರ್. ಭಟ್, ಟ್ರಸ್ಟಿಗಳಾದ ರಮೇಶ್ ನಾಯಕ್, ಶಕುಂತಲಾ ಆರ್. ಕಿಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ತ ಬಂಟ್ವಾಳ್‌ಕರ್, ಸಂಶೋಧನಾ ವಿಭಾಗದ ನಿರ್ದೇಶಕ ಡಾ| ಬಿ. ದೇವದಾಸ ಪೈ, ಅನಿವಾಸಿ ಉದ್ಯಮಿ ಮತ್ತು ದಾನಿ ಜೇಮ್ಸ್ ಮೆಂಡೋನ್ಸಾ, ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೂ, ಬಾರ್ಕೂರು, ಕೊಂಕಣಿ ಸಾಹಿತಿಗಳಾದ ಎಚ್. ಎಂ. ಪೆರ್ನಾಲ್, ಟೈಟಸ್ ನೊರೊನ್ಹಾ, ಕುಡ್ಪಿ ರಜನಿಕಾಂತ ಶೆಣೈ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.


Spread the love