
ಮಾ.12ರಂದು ಮೋದಿಯಿಂದ ದಶಪಥ ರಸ್ತೆ ಉದ್ಘಾಟನೆ
ಮೈಸೂರು: ಮೈಸೂರು-ಬೆಂಗಳೂರು ದಶಪಥವನ್ನು ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವರು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಎಸ್ಪಿಜಿ ಅನುಮತಿ ನೀಡಿದರೆ ಸುಮಾರು 2 ಕಿ.ಮೀ ದೂರ ರೋಡ್ ಶೋ ಮಾಡಲು ಉದ್ದೇಶಿಸಿದ್ದೇವೆ. ರೋಡ್ ಶೋ ನಂತರ ಸಾರ್ವಜನಿಕ ಸಭೆಯನ್ನು ಮದ್ದೂರು ಬಳಿಯ ಗೆಜ್ಜೆಲಗೆರೆಯಲ್ಲಿ ಆಯೋಜಿಸಲಾಗಿದೆ ಎಂದರು.
ಸರ್ವೀಸ್ ರಸ್ತೆ ಕೆಲವು ಕಡೆ ಪೂರ್ಣಗೊಳ್ಳಬೇಕಿದೆ. ಸರ್ವೀಸ್ ರಸ್ತೆ ಪೂರ್ಣಗೊಳ್ಳಲು ನ್ಯಾಯಾಲಯದಲ್ಲಿನ ಜಮೀನು ಕುರಿತ ಮೊಕದ್ದಮೆ ಬಾಕಿ ಇದೆ. ಅದು ತೀರ್ಮಾನವಾದ ಬಳಿಕ ಕೂಡಲೇ ಸರ್ವೀಸ್ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಹೈವೇಯ ಒಂದು ಭಾಗದ ಟೋಲ್ ಸಂಗ್ರಹವನ್ನು ಮಾ.14 ರವರೆಗೆ ಮುಂದೂಡಿದ್ದೇವೆ ಎಂದು ಅವರು ಹೇಳಿದರು.
ಬೆಂಗಳೂರು-ನಿಡಘಟ್ಟದವರೆಗೂ ಟೋಲ್ ಸಂಗ್ರಹಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಆದ ಮೈಸೂರು-ಊಟಿ ಹೈವೇ ರಸ್ತೆಗೆ ಸರ್ವೀಸ್ ರಸ್ತೆಯೇ ಇಲ್ಲ. ಈಗ ಇವರೆಲ್ಲ ಬೆಂಗಳೂರು-ಮೈಸೂರು ಹೈವೇ ಸರ್ವೀಸ್ ರಸ್ತೆ ಬಗ್ಗೆ ಮಾತಾಡುತ್ತಿದ್ದಾರೆ. ನಾವು ಸರ್ವೀಸ್ ರಸ್ತೆಯನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ. ಸರ್ವೀಸ್ ರಸ್ತೆಯನ್ನೇ ಮಾಡದೆ ನೀವು ಟೋಲ್ ಸಂಗ್ರಹ ಹೇಗೆ ಆರಂಭಿಸಿದಿರಿ ಎಂದು ಕಾಂಗ್ರೆಸ್‌ನ ಎಚ್.ಸಿ.ಮಹದೇವಪ್ಪ ಅವರನ್ನು ಕೇಳಿ ಎಂದು ತಿರುಗೇಟು ನೀಡಿದರು.
ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪ್ರತಾಪ ಸಿಂಹ, ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಬಿ. ಹರ್ಷವರ್ಧನ, ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಮೈಲ್ಯಾಕ್ ಅಧ್ಯಕ್ಷ ರಘು ಕೌಟಿಲ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್ ಸ್ವಾಗತಿಸಿದರು.