
ಮಾ.15,ಕಾನೂನು ಸಚಿವರ ನಿವಾಸಕ್ಕೆ ಮುತ್ತಿಗೆ
ಮೈಸೂರು: ಪರಿಶಿಷ್ಟ ಜಾತಿಯಿಂದ ಎಡಗೈ ಮತ್ತು ಬಲಗೈ ಹೊರತುಪಡಿಸಿ, ಉಳಿದ 99ಜಾತಿಗಳನ್ನು ವರ್ಗೀಕರಿಸುವ ಹುನ್ನಾರದ ವಿರುದ್ಧ ಮಾ.15ರಂದು ಕಾನೂನು ಸಚಿವ ಮಾಧುಸ್ವಾಮಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಬಂಜಾರ ಗುರು ಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಂಜಾರ ಸಮುದಾಯಕ್ಕೆ ಆಗಲೇ ಮೀಸಲಾತಿ ನೀಡಿದ್ದರಿಂದಾಗಿ ನಾವು ವಿದ್ಯಾವಂತರಾಗಲು ಸಾಧ್ಯವಾಯಿತು. ಆದರೆ ಈಗ ಪ.ಜಾತಿಯಲ್ಲಿರುವ ನಮ್ಮ ಸಮುದಾಯ ಸೇರಿ 99 ಜನಾಂಗವನ್ನು ಸರ್ಕಾರ ಮೀಸಲಾತಿಯಿಂದ ವರ್ಗೀಕರಿಸಲು ತೀರ್ಮಾನಿಸಿದೆ ಎಂದು ಅವರು ಆರೋಪಿಸಿದರು.
ನಮಗೆ ನೀಡಲಾದ ಮೀಸಲಾತಿ ಕಸಿಯಲು ಹುನ್ನಾರ ನಡೆಯುತ್ತಿದೆ. ಯಾವುದೇ ಸಾರ್ವಜನಿಕ ಚರ್ಚೆ ನಡೆಸದೆ ಎಡಗೈ ಮತ್ತು ಬಲಗೈ ಸಮುದಾಯ ಹೊರತುಪಡಿಸಿ ಉಳಿದ ಎಲ್ಲಾ 99ಜನಾಂಗವನ್ನು ಮೀಸಲಾತಿಯಿಂದ ವರ್ಗೀಕರಿಸಿದರೆ ನಮಗೆ ತೊಂದರೆ ಆಗುತ್ತದೆ. ಯಾವುದೇ ಕಾರಣಕ್ಕೂ ವರ್ಗೀಕರಿಸಬಾರದು. ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರು ಈ ಸಂಬಂಧ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಮಾ. 15 ರಂದು 99 ಸಮುದಾಯದವರು ಅವರ ಮನೆಗೆ ಮುತ್ತಿಗೆ ಹಾಕುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.
ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇರಬಾರದು. ಈ ಹಿಂದೆ ಇದ್ದಂತೆ ಯಥಾವತ್ತಾಗಿ ಇರಬೇಕು. ನಮ್ಮ ಹಕ್ಕನ್ನು ನಾವೇ ರಕ್ಷಿಸಿಕೊಳ್ಳಬೇಕು. ಏಕೆಂದರೆ ಮೀಸಲಾತಿ ಕುರಿತು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರೂ ಕೂಡ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ನಾವೇ ಹೋರಾಟ ನಡೆಸಿ ಮೀಸಲಾತಿ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.