
ಮಾ.19ರಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವದ ಉದ್ಘಾಟನಾ ಸಮಾರಂಭವು ಮಾ.19ರಂದು ರವಿವಾರ ಮಧ್ಯಾಹ್ನ 2ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಉಪಾಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಭಾಗವಹಿಸಲಿರುವರು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಇದರ ಸದಸ್ಯರಾದ ಅರುಣ್ ಕುಮಾರ್ ಶಿರೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಗೌರವ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದ ಯು.ಎಸ್.ಶೆಣೈ ಅವರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಸ್ಥಾಪಕ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಗೌರವಿಸಲಾಗುವುದು. ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಅವರು ಬರೆದ ‘ನಮ್ಮ ಉಡುಪಿ’ ಪುಸ್ತಕವು ಬಿಡುಗಡೆಗೊಳ್ಳಲಿದೆ. ಸಭಾ ಕಾರ್ಯಕ್ರಮಕ್ಕೆ ಮೊದಲು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು.