ಮಾ.25ರಂದು ಕೇಂದ್ರ, ರಾಜ್ಯ ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ ಕಾಪು ಉತ್ತರ ಬ್ಲಾಕ್ ಸಮಿತಿಯಿಂದ  ‘ಜನಧ್ವನಿ’ ಪಾದಯಾತ್ರೆ

Spread the love

ಮಾ.25ರಂದು ಕೇಂದ್ರ, ರಾಜ್ಯ ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ ಕಾಪು ಉತ್ತರ ಬ್ಲಾಕ್ ಸಮಿತಿಯಿಂದ  ‘ಜನಧ್ವನಿ’ ಪಾದಯಾತ್ರೆ

ಉಡುಪಿ : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಈ ಬಗ್ಗೆ ಜನಜಾಗೃತಿ ಮೂಡಿಸಲು ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾ.25ರ ಗುರುವಾರ ಪೆರ್ಡೂರಿನಿಂದ 80 ಬಡಗುಬೆಟ್ಟುವರೆಗೆ ‘ಜನಧ್ವನಿ’ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು. ಒಟ್ಟು 16ಕಿ.ಮೀ. ಉದ್ದದ ಈ ಪಾದಯಾತ್ರೆ ಮುಂಜಾನೆ 9:30ಕ್ಕೆ ಪೆರ್ಡೂರು ಪೇಟೆಯಲ್ಲಿ ಪ್ರಾರಂಭಗೊಳ್ಳಲಿದೆ. ಹಿರಿಯಡ್ಕ, ಕೊಡಿಬೆಟ್ಟು, ಆತ್ರಾಡಿ, ಪರ್ಕಳ ಮಾರ್ಗವಾಗಿ ಸಂಜೆ 5 ಗಂಟೆಗೆ 80 ಬಡಗುಬೆಟ್ಟು ಪಂಚಾಯತ್ ಕಚೇರಿ ಎದುರು ಮುಕ್ತಾಯಗೊಳ್ಳಲಿದೆ ಎಂದರು.

ಜನಜಾಗೃತಿಗಾಗಿ ನಡೆಯುವ ಈ ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ಜಿಲ್ಲಾ ನಾಯಕರು ಗಳು ಪಾಲ್ಗೊಳ್ಳಲಿದ್ದಾರೆ ಎಂದು ವಿನಯಕುಮಾರ್ ಸೊರಕೆ ತಿಳಿಸಿದರು.
ಕಳೆದ ತಿಂಗಳು ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಹೆಜಮಾಡಿಯಿಂದ ಬೈಂದೂರುವರೆಗಿನ 100ಕಿ.ಮೀ. ಉದ್ದದ ಜನಧ್ವನಿ ಪಾದ ಯಾತ್ರೆ ಯಶಸ್ವಿಯಾಗಿ ನಡೆದಿದ್ದು, ಇದರಿಂದ ಸ್ಪೂರ್ತಿ ಪಡೆದಿರುವ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜನಧ್ವನಿ ಪಾದಯಾತ್ರೆಯನ್ನು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ನಡೆಸಲು ಸೂಚಿಸಿದ್ದಾರೆ ಎಂದರು.

ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ 110 ದಿನಗಳಿಗೂ ಅಧಿಕ ಸಮಯದಲ್ಲಿ ಹೊಸದಿಲ್ಲಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ದೇಶದ ರೈತ ಸಮುದಾಯಕ್ಕೆ ಬೆಂಬಲವಾಗಿ ನಾವೀ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಈ ಪಾದಯಾತ್ರೆ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲೂ ಮೂರು ವರ್ಷಗಳಿಂದ ಮರಳು ಸಮಸ್ಯೆ ಬಗೆಹರಿಯದೇ ಹಾಗೆ ಉಳಿದು ಬಿಟ್ಟಿದೆ. ಹಿರಿಯಡ್ಕ ಸಮೀಪದ ಬಜೆಯಲ್ಲಿ ಸ್ವರ್ಣ ನದಿಯ ಹೂಳೆತ್ತುವ ನೆಪದಲ್ಲಿ ಮರಳನ್ನು ಅಕ್ರಮವಾಗಿ ತೆಗೆದು ನಡೆದಿರುವ 40ಕೋಟಿ ರೂ.ಗಳಿಗೂ ಅದಿಕ ಭ್ರಷ್ಟಾಚಾರದಲ್ಲಿ ಜನಪ್ರತಿನಿಧಿಗಳೇ ಭಾಗಿಯಾಗಿದ್ದಾರೆ. ಆದರೆ ಈ ಬಗ್ಗೆ ತನಿಖೆಯನ್ನು ಬೇಕೆಂದೇ ವಿಳಂಬ ಮಾಡಲಾಗುತ್ತಿದೆ ಎಂದವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಮುಖಂಡರಾದ ನಾಗೇಶ್ ಉದ್ಯಾವರ, ಹರೀಶ್ ಕಿಣಿ ಹಾಗೂ ಹಿರಿಯಡ್ಕ ಬ್ಲಾಕ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ಉಪಸ್ಥಿತರಿದ್ದರು.


Spread the love