ಮೀನುಗಾರರಿಗೆ ಸೀಮೆಎಣ್ಣೆ ನೀಡಿಲ್ಲ, ಅವರೆಲ್ಲ ಮೀನು ಹಿಡಿಯುವುದು ಹೇಗೆ?: ಸಿದ್ದರಾಮಯ್ಯ

Spread the love

ಮೀನುಗಾರರಿಗೆ ಸೀಮೆಎಣ್ಣೆ ನೀಡಿಲ್ಲ, ಅವರೆಲ್ಲ ಮೀನು ಹಿಡಿಯುವುದು ಹೇಗೆ?: ಸಿದ್ದರಾಮಯ್ಯ

ಬೆಳಗಾವಿ: ಕರಾವಳಿಯ ಮೀನುಗಾರರಿಗೆ ತಕ್ಷಣ ಸೀಮೆಎಣ್ಣೆ ಹಂಚಿಕೆ ಮಾಡುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳಗಾವಿ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.

ಸೀಮೆಎಣ್ಣೆ ನೀಡದೆ ಹೋದರೆ ಮೀನುಗಾರರು ಬದುಕುವುದು ಹೇಗೆ? ಸಚಿವರು ತಾವು ಮುಖ್ಯಮಂತ್ರಿಗಳ ಜೊತೆ ಮಾತಾಡಿದ್ದೇನೆ, ಕೇಂದ್ರ ಸರ್ಕಾರದ ಜೊತೆ ಮಾತಾಡಿದ್ದೇನೆ ಎಂದರೆ ಆಗಲ್ಲ. ಕೇಂದ್ರ ಸರ್ಕಾರ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಕೈಗಾರಿಕೆಗಳಿಗೆ ನೀಡುವ ಸೀಮೆಎಣ್ಣೆಯನ್ನು ಮೀನುಗಾರಿಕಾ ದೋಣಿಗಳಿಗೆ ಹಂಚಿಕೆ ಮಾಡುತ್ತೇವೆ ಎಂದು ಹೇಳುವುದು ನೀರ ಮೇಲಿನ ಗುಳ್ಳೆಯ ಹಾಗೆ, ಬಂದಷ್ಟು ದಿನ ಬಂತು, ಹೋದರೆ ಹೋಯಿತು. ಸುಮಾರು 800 ಕ್ಕೂ ಅಧಿಕ ಮೀನುಗಾರಿಕಾ ನಾಡ ದೋಣಿಗಳು ಇವೆ. ಇದನ್ನು ನಂಬಿಕೊಂಡಿರುವ ಕುಟುಂಬಗಳು ಸಾಕಷ್ಟಿವೆ. ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತರುವ ಕೆಲಸ ಮಾಡಬೇಕಿತ್ತು ಅಥವಾ ರಾಜ್ಯದಲ್ಲೇ ಬದಲಿ ವ್ಯವಸ್ಥೆಯನ್ನಾದರೂ ಮಾಡಬೇಕಾಗಿತ್ತು ಎಂದು ಹೇಳಿದರು.

ಕಳೆದ 10 ತಿಂಗಳಿಂದ ಸೀಮೆಎಣ್ಣೆಯನ್ನು ನೀಡಿಲ್ಲ, ಅವರೆಲ್ಲ ಮೀನು ಹಿಡಿಯುವುದು ಹೇಗೆ? ಇಷ್ಟು ಸಮಯದಿಂದ ಸರ್ಕಾರ ನಿದ್ದೆ ಮಾಡುತ್ತಿದೆಯಾ? ತಿಂಗಳಿಗೆ ಕನಿಷ್ಠ 400 ಲೀಟರ್ ಕೊಡಬೇಕಿತ್ತು, ಹೀಗಾದರೆ ನಾಡ ದೋಣಿ ನಡೆಸುವ ಮೀನುಗಾರರು ಏನು ಮಾಡಬೇಕು? ಈ ಕೂಡಲೇ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ಶೀಘ್ರದಲ್ಲಿ ಕೊಡ್ತೇವೆ ಎಂದರೆ ಆಗಲ್ಲ, ಯಾವಾಗ ಕೊಡುತ್ತೀರ ಎಂಬುದನ್ನು ಸಚಿವರು ಸದನಕ್ಕೆ ಸ್ಪಷ್ಟವಾಗಿ ಹೇಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮೀನುಗಾರಿಕಾ ಸಚಿವ ಅಂಗಾರ ಉತ್ತರಿಸಿದ ಈಗಾಗಲೇ 3000 ಲೀಟರ್ ಸೀಮೆ ಎಣ್ಣೆ ಬಿಡುಗಡೆಯಾಗಿದ್ದು ಅದನ್ನು ಹಂತ ಹಂತವಾಗಿ ವಿತರಿಸಲಾಗಿದೆ ಇನ್ನು ಏನು ಬಾಕಿ ಇದೆ ಅದಕ್ಕಾಗಿ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಇಂಡಸ್ಟ್ರೀಯಲ್ ಸೀಮೆ ಎಣ‍್ಣೆಯನ್ನು ಕೂಡ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು

ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಆರ್ ವಿ ದೇಶಪಾಂಡೆ ಸಚಿವರ ಉತ್ತರ ಗೊಂದಲಮಯವಾಗಿದ್ದು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಿದ್ದಾರೆ ಮುಖ್ಯಮಂತ್ರಿಗಳು ಪ್ರತಿನಿತ್ಯ ಸಿಗುತ್ತಾರೆ ಹಾಗಿದ್ದರೂ ಕೂಡ ವಿಳಂಬ ಧೋರಣೆ ಯಾಕೆ?

ಈ ನಡುವೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ಉಪನಾಯಕ ಯು ಟಿ ಖಾದರ್ ಸರಕಾರ ಸದನವನ್ನು ದಾರಿ ತಪ್ಪಿಸುವುದು ಬೇಡ ಸರಕಾರ ಮೀನುಗಾರರಿಗೆ ಸೀಮೆ ಎಣ‍್ಣೆ ನೀಡುವ ಕಾನೂನು ಇಲ್ಲ ಕೇಂದ್ರ ಸರಕಾರ ಸೀಮೆ ಎಣ್ಣೆನೀಡುವುದು ಡೊಮೆಸ್ಟಿಕ್ ಲೈನ್ ನವರಿಗೆ ಆಗಿದ್ದು ಸದ್ಯ ಎಲ್ಲರಿಗೂ ಗ್ಯಾಸ್ ಸಂಪರ್ಕ ಇದ್ದು ಇದರ ಸಂಪೂರ್ಣ ಮಾಹಿತಿ ಕೇಂದ್ರ ಸರಕಾರಕ್ಕೆ ಇದೆ. ಆದ್ದರಿಂದ ರಾಜ್ಯ ಸರಕಾರ ಮೀನುಗಾರರಿಗೆ ಬೇಕಾಗಿರುವ ಸೀಮೆ ಎಣ್ಣೆಗೆ ಅನುದಾನವನ್ನು ಬಿಡುಗಡೆಮಾಡಿ ಅದರಿಂದ ಒದಗಿಸುವ ಕೆಲಸ ಮಾಡಲಿ. ಡಬಲ್ ಇಂಜಿನ್ ಸರಕಾರ ಮೀನುಗಾರರನ್ನು ಕೇವಲ ರಾಜಕೀಯ ಲಾಭ ಗಳಿಸಲು ಉಪಯೋಗಿಸಿದ್ದು ಬಿಟ್ಟರೆ ಅವರಿಗಾಗಿ ಯಾವುದೇ ಯೋಜನೆ ಹಾಕಿಲ್ಲ ಎಂದರು.


Spread the love