
ಮೀನುಗಾರರ ಧ್ವನಿಯಾದ ಸಿದ್ದರಾಮಯ್ಯನವರಿಗೆ ಮಾಜಿ ಶಾಸಕ ಪೂಜಾರಿ ಕೃತಜ್ಞತೆ
ಕುಂದಾಪುರ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಕರಾವಳಿ ಮೀನುಗಾರರ ಪರವಾಗಿ ಧ್ವನಿಯಾಗಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯನವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ನಾಡಾ ದೋಣಿ ಮೀನುಗಾರರಿಗೆ ಸೀಮೆಎಣ್ಣೆ ದೊರಕದೆ ಆಗುತ್ತಿರುವ ತಾಪತ್ರಯಗಳನ್ನು ವಿವರಿಸಿ ಮೀನುಗಾರಿಕಾ ಸಚಿವರ ಹಾಗೂ ಸರ್ಕಾರದ ಮುಖ್ಯಸ್ಥರ ಗಮನ ಸೆಳೆಯುವ ಮೂಲಕ ಬೈಂದೂರು ಕ್ಷೇತ್ರದ ಸಮಸ್ತ ಮೀನುಗಾರರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ. ಸೀಮೆಎಣ್ಣೆ ನೀಡದೆ ಮೀನುಗಾರರನ್ನು ಕಾಡುತ್ತಿರುವ ಸರ್ಕಾರದ ಕಣ್ಣು ತೆರೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತರಾಳದ ಕೃತಜ್ಞತೆ ಅರ್ಪಿಸುತ್ತೇನೆ ಎಂದಿದ್ದಾರೆ.
ಕಳೆದ ನಾಲ್ಕೈದು ತಿಂಗಳುಗಳಿಂದ ನಾಡಾ ದೋಣಿ ಮೀನುಗಾರರಿಗೆ ಸರ್ಕಾರ ಸೀಮೆಎಣ್ಣೆ ವಿತರಿಸದೇ ಅವರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ಸುಮಾರು 800 ಕ್ಕೂ ಅಧಿಕ ನಾಡಾ ದೋಣಿಗಳು ಇದ್ದು, ಮೀನುಗಾರಿಕೆಯಿಂದಲೇ ಮೀನುಗಾರರ ಕುಟುಂಬಗಳು ಜೀವನ ಸಾಗಿಸುತ್ತಿರುವುದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಪೂಜಾರಿ ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.