ಮೀನುಗಾರರ ಮೇಲೆ ಹಲ್ಲೆ: ಕರಾವಳಿ ಶಾಸಕ, ಸಂಸದರೇ ಬಡ ಮೀನುಗಾರರಿಗೆ ರಕ್ಷಣೆ ನೀಡಿ – ರಮೇಶ್ ಕಾಂಚನ್

Spread the love

ಮೀನುಗಾರರ ಮೇಲೆ ಹಲ್ಲೆ: ಕರಾವಳಿ ಶಾಸಕ, ಸಂಸದರೇ ಬಡ ಮೀನುಗಾರರಿಗೆ ರಕ್ಷಣೆ ನೀಡಿ – ರಮೇಶ್ ಕಾಂಚನ್

ಕರಾವಳಿ ಕರ್ನಾಟಕದ ಮೀನುಗಾರರ ಮೇಲೆ ಅನ್ಯರಾಜ್ಯದ ಮೀನುಗಾರರು ಮಾಡುತ್ತಿರುವ ಹಲ್ಲೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದರೊಂದಿಗೆ ರಾಜ್ಯದ ಬಡ ಮೀನುಗಾರರಿಗೆ ರಕ್ಷಣೆ ನೀಡುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಗ್ರಹಿಸಿದ್ದಾರೆ.

ಬಡ ಮೀನುಗಾರರ ಮೇಲೆ ವಿವಿಧ ರೀತಿಯಲ್ಲಿ ಹಲ್ಲೆಗಳು ಆಗುತ್ತಿದ್ದು ನೆರೆ ರಾಜ್ಯದಲ್ಲಿ ತಮ್ಮ ಹೊಟ್ಟೆ ಪಾಡಿಗಾಗಿ ತೆರಳಿದ್ದ ವೇಳೆ ಅವರಿಗೆ ಸೂಕ್ತ ರಕ್ಷಣೆ ಇಲ್ಲದೆ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಉಂಟಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಸಾಹಸಮಯ ಜೀವನದೊಂದಿಗೆ ಸಮುದ್ರದಲ್ಲಿ ಕಾರ್ಯ ನಿರ್ವಹಿಸುವ ಮೀನುಗಾರರು ಕೆಲವೊಮ್ಮೆ ಆಕಸ್ಮಿಕವಾಗಿ ಅನಾಹುತಕ್ಕೆ ಒಳಗಾಗದರೆ ಇನ್ನು ಕೆಲವೊಮ್ಮೆ ನೆರೆರಾಜ್ಯದ ಮೀನುಗಾರರಿಂದ ನಿರಂತರ ಹಲ್ಲೆಗೊಳಗಾಗುತ್ತಿದ್ದಾರೆ. ಕನ್ಯಾಕುಮಾರಿಯಿಂದ ನೇರ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ಫೆ.8ರಂದು ಕರ್ನಾಟಕದ ಆಳ ಸಮುದ್ರ ದೋಣಿಗಳು ಮೀನುಗಾರಿಕೆ ಮಾಡುತ್ತಿರುವಾಗ ಅನ್ಯರಾಜ್ಯದ ಬೋಟುಗಳು ಕರ್ನಾಟಕದ ಬೋಟುಗಳನ್ನು ಸುತ್ತುವರಿದು ಸೀಸ, ಕಲ್ಲು, ಮರದ ತುಂಡುಗಳಿಂದ ಜಖಂಗೊಳಿಸಿ ರಾಜ್ಯದ ಮೀನುಗಾರರ ಮೇಲೆ ಹಲ್ಲೆ ಮಾಡಿ, ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳನ್ನು ದೋಚಿಕೊಂಡು ಹೋಗಿರುವುದು ಖಂಡನೀಯವಾಗಿದೆ. ಈ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತು ಮೀನುಗಾರ ಸಮುದಾಯದೊಂದಿಗೆ ನಿಲ್ಲಬೇಕಾಗಿದ್ದು ಇಂತಹ ಕೃತ್ಯ ಎಸಗಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಕರಾವಳಿಯ ಶಾಸಕರು, ಸಂಸದರು ಮುಖ್ಯಮಂತ್ರಿಗಳ ಮೂಲಕ ಒತ್ತಡತಂದು ತಮಿಳುನಾಡಿನ ಸರಕಾರಕ್ಕೆ ಒತ್ತಾಯಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ


Spread the love