Home Mangalorean News Kannada News ಮೀನುಗಾರರ ಸುರಕ್ಷತೆ – ಸಚಿವ ಮಂಕಾಳ ಎಸ್. ವೈದ್ಯರಿಂದ ಸಭೆ

ಮೀನುಗಾರರ ಸುರಕ್ಷತೆ – ಸಚಿವ ಮಂಕಾಳ ಎಸ್. ವೈದ್ಯರಿಂದ ಸಭೆ

Spread the love

ಮೀನುಗಾರರ ಸುರಕ್ಷತೆ – ಸಚಿವ ಮಂಕಾಳ ಎಸ್. ವೈದ್ಯರಿಂದ ಸಭೆ

ಮಂಗಳೂರು:  ಕಡಲಿನಲ್ಲಿ ಮೀನುಗಾರರ ಸುರಕ್ಷತಾ ಕ್ರಮಗಳು ಮತ್ತು ನಿಯಮಾವಳಿಗಳನ್ನು ಬಲಪಡಿಸುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರಿನ ಕೋಸ್ಟ್‍ಗಾರ್ಡ್ ಕಚೇರಿಯಲ್ಲಿ ಸಭೆ ನಡೆಯಿತು.

ಸಚಿವರು ಮಾತನಾಡಿ, ಮೀನುಗಾರ ಸಮುದಾಯದ ಜೀವನೋಪಾಯವನ್ನು ರಕ್ಷಿಸಲು ಸರಕಾರ ಎಲ್ಲ ಕ್ರಮ ಕೈಗೊಳ್ಳಲಿದೆ. ಮೀನುಗಾರರು ತಮ್ಮ ಜೀವವನ್ನು ಪಣಕ್ಕಿಟ್ಟು ಮೀನುಗಾರಿಕೆಗೆ ತೆರಳುತ್ತಾರೆ. ಇವರ ಸುರಕ್ಷತೆ ನಮ್ಮೆಲ್ಲರ ಆದ್ಯತೆಯಾಗಿದೆ. ಸಮುದ್ರದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅಪಾಯಗಳನ್ನು ತಗ್ಗಿಸಲು ಎಲ್ಲರೂ ಕಟಿಬದ್ಧರಾಗಿರಬೇಕು ಎಂದು ಹೇಳಿದರು.

ಮೀನುಗಾರಿಕೆಗೆ ತೆರಳುವ ನಾಡದೋಣಿ, ಬೋಟುಗಳಲ್ಲಿ ಸುರಕ್ಷತಾ ಪರಿಕರಗಳಿಗೆ ಮೀನುಗಾರರು ಆದ್ಯತೆ ನೀಡಬೇಕು. ಸಮುದ್ರದ ಉಬ್ಬರ, ನದಿಗಳಲ್ಲಿ ನೀರಿನ ಹರಿವು ಹೆಚ್ಚಳದ ಸಂದರ್ಭದಲ್ಲಿ ಮೀನುಗಾರರಿಗೆ ಮುನ್ಸೂಚನೆ ನೀಡಬೇಕು. ಮೀನುಗಾರರು ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ ಸಂದರ್ಭದಲ್ಲಿ ತಕ್ಷಣವೇ ಅವರಿಗೆ ನೆರವು ದೊರಕಿಸಲು ವ್ಯವಸ್ಥೆಗಳಾಗಬೇಕು ಎಂದು ಮಂಕಾಳ ಎಸ್. ವೈದ್ಯ ತಿಳಿಸಿದರು.

ಕೋಸ್ಟ್‍ಗಾರ್ಡ್, ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಮೀನುಗಾರರ ಸಂಘಟನೆಗಳು/ಒಕ್ಕೂಟಗಳ ಪ್ರಮುಖ ನಾಯಕರು ಸೇರಿದಂತೆ ಇತರ ಪಾಲುದಾರರು ಸಭೆಯಲ್ಲಿ ಭಾಗವಹಿಸಿದ್ದರು.


Spread the love

Exit mobile version