
ಮುಂಗಾರು ವಿಕೋಪ ತಡೆಗೆ ಸನ್ನದ್ಧರಾಗಲು ಸೂಚನೆ
ರಾಮನಗರ: ಮುಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡು ಸನ್ನದ್ದರಾಗಿರಬೇಕು. ಈ ಕುರಿತು ಯಾರು ನಿರ್ಲಕ್ಷ್ಯ ವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ಭಾರಿ ಮಳೆ, ಪ್ರವಾಹ, ನೆರೆಹಾವಳಿ ಘಟನೆಗಳ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುನ್ನೆಚ್ಚರಿಕೆ ವಹಿಸದ ಹೊರತು ಪರಿಸ್ಥಿತಿ ನಿಯಂತ್ರಣ ಅಸಾಧ್ಯ ಯಾವುದೇ ಸಿದ್ದತೆ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸುವಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಮನಗರ ಜಿಲ್ಲೆಯಲ್ಲಿ ಈ ಹಿಂದೆ ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದ ಬಹಳಷ್ಟು ತೊಂದರೆಯಾಗಿದ್ದ ಪ್ರದೇಶಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಮಳೆ ಹೆಚ್ಚು ಬೀಳುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಮಂಚನಬೆಲೆ ಡ್ಯಾಂ ಸುತ್ತಮುತ್ತಲು ಹಾಗೂ ಅರ್ಕಾವತಿ ನದಿಯ ಪಾತ್ರಗಳಲ್ಲಿ ತೊಂದರೆಗೀಡಾಗುವ ಸನ್ನಿವೇಶ ಎದುರಾಗಬಹುದು. ಜನರ ಸ್ಥಳಾಂತರಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ದಿನದ 24×7 ಅವಧಿ ಕೆಲಸ ನಿರ್ವಹಿಸಬೇಕು. ಜೀವಹಾನಿ, ಬೆಳೆಹಾನಿಯಾದ ಬಗ್ಗೆ ಮಾಹಿತಿ ಬಂದಲ್ಲಿ ಸಂಬಂಧಪಟ್ಟ ತಹಶೀಲ್ದಾರರು ತಕ್ಷಣ ಪರಿಶೀಲಿಸಬೇಕು ನಂತರ ಘಟನೆ ನಡೆದ 24 ಗಂಟೆಯೊಳಗೆ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಎಂದರು. ಜಿಲ್ಲೆಯಲ್ಲಿರುವ 101 ಕೆರೆಗಳ ದಂಡೆಗಳನ್ನು ಪರೀಕ್ಷಿಸಿ ಸೋರಿಕೆ ಇದ್ದರೆ ತಕ್ಷಣ ಸರಿಪಡಿಸಬೇಕು, ತಗ್ಗು ಪ್ರದೇಶದ ಮನೆಗಳಿಗೆ ಎಚ್ಚರಿಕೆ ನೀಡಬೇಕು, ಚರಂಡಿ, ಚಾನಲ್‌ಗಳು ಸರಾಗವಾಗಿ ಮಳೆನೀರು ಹರಿದು ಹೋಗುವಂತೆ ಪರಿಶೀಲನೆ ಮಾಡಬೇಕು. ಯಾವುದೇ ದುರಸ್ಥಿಯಿದ್ದಲ್ಲಿ ಪರಿಶೀಲಿಸಿ ದುರಸ್ತಿಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳು ಮಳೆಯಿಂದ ಸೋರುವುದನ್ನು ತಡೆಗಟ್ಟಲು ಕ್ರಮವಹಿಸಬೇಕು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು. ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಅಧಿಕಾರಿಗಳು ಕ್ರಮವಹಿಸಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಆರೋಗ್ಯ ತಪಾಸಣೆ, ಅಗತ್ಯ ಔಷದಿಗಳನ್ನು ಸಂಗ್ರಹಮಾಡಲು ಕ್ರಮವಹಿಸುವಂತೆ ತಿಳಿಸಿದರು.
ಭಾರಿ ಮಳೆಯಿಂದ ಪ್ರವಾಹ ಬಂದ ಸಂದರ್ಭದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಒಂದುವೇಳೆ ಜೀವಹಾನಿಯಾದಲ್ಲಿ ತಕ್ಷಣ 5ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು 24 ಗಂಟೆಯೊಳಗೆ ವಿತರಿಸುವಂತೆ ಸೂಚಿಸಿದರು. ಇದೇ ವೇಳೆ ಕೃಷಿ ಮತ್ತು ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಹಾಗೂ ಬೆಸ್ಕಾಂ ನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ ತುರ್ತು ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡುವಂತೆ ಜನರಿಗೆ ತಿಳಿಸಬೇಕು ಎಂದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹಿಂದೆ ಭಾರಿ ಮಳೆಯಿಂದ ನೀರು ಸಂಗ್ರಹವಾಗುತ್ತಿದ್ದ ಸ್ಥಳಗಳನ್ನು ಗುರುತಿಸಿ ಮಳೆನೀರು ಸರಾಗವಾಗಿ ಹೋಗುವಂತೆ ದುರಸ್ತಿ ಮಾಡಲಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಅಗತ್ಯ ದೋಣಿಗಳು, ಮುಳುಗು ತಜ್ಞರು ಹಾಗೂ ಅಗತ್ಯ ಪರಿಕರಗಳೊಂದಿಗೆ ಪರಿಸ್ಥಿತಿ ನಿಭಾಯಿಸಲು ಸಿದ್ದರಿರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಬಿ.ಸಿ, ಡಿವೈಎಸ್‌ಪಿ ದಿನಕರ್ ಶೆಟ್ಟಿ, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.