ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ಉದ್ಯೋಗ ಕೊಡುತ್ತೇವೆ: ಶೋಭಾ ಕರಂದ್ಲಾಜೆ

Spread the love

ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ಉದ್ಯೋಗ ಕೊಡುತ್ತೇವೆ: ಶೋಭಾ ಕರಂದ್ಲಾಜೆ
 

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಚುನಾವಣೆಯಲ್ಲಿ ಯುವಕರಿಗೆ 10 ಲಕ್ಷ ಉದ್ಯೋಗ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದರು. ಅದರಂತೆ ಈಗ ನಡೆದುಕೊ‌ಂಡಿದ್ದಾರೆ’ ಎಂದು ಕೇಂದ್ರ ಕೃಷಿ ಮತ್ತು‌ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು 10 ಲಕ್ಷ ಉದ್ಯೋಗಿಗಳ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿದ ಅಂಗವಾಗಿ ನೈರುತ್ಯ ರೈಲ್ವೆ ವಲಯವು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

‘ಪ್ರಧಾನಿ ಅವರು ದೇಶದಾದ್ಯಂತ 50 ಕೇಂದ್ರಗಳಲ್ಲಿ 75 ಸಾವಿರ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದ ರೈಲ್ವೆ, ಅಂಚೆ ಮತ್ತು ರಕ್ಷಣಾ ಇಲಾಖೆ‌ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸಲಾಗುವುದು. ಮೋದಿ ಅವರು ಕೇವಲ ಭಾಷಣ ಮಾಡುವುದಿಲ್ಲ. ಅದು ಅನುಷ್ಠಾನಗೊಳಿಸುತ್ತಾರೆ’ ಎಂದರು.

’10 ಲಕ್ಷ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಹಂತದ ಕೆಲಸ ಈಗ ಆರಂಭವಾಗಿದೆ. ಕೇಂದ್ರ‌ ಸರ್ಕಾರ ಉದ್ಯೋಗ ಕಲ್ಪಿಸಿಲ್ಲ‌ ಎಂದು ಟೀಕಿಸಿದವರಿಗೆ ಮುಂದಿನ‌ ದಿನಗಳಲ್ಲಿ ಈಗ ಉದ್ಯೋಗ ಪಡೆದವರು ಉತ್ತರ ನೀಡಲಿದ್ದಾರೆ’ ಎಂದು ತಿಳಿಸಿದರು.

‘ಈ ಹಿಂದೆ ರೈಲು ನಿಲ್ದಾಣ, ರೈಲುಗಳು‌ ಗಬ್ಬು‌ ನಾರುತ್ತಿದ್ದವು. ಈಗ ವಿಮಾನ‌ ನಿಲ್ದಾಣದ ರೀತಿ‌ ಅಭಿವೃದ್ಧಿ ಆಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಬಸ್ ನಿಲ್ದಾಣಗಳ ಅಭಿವೃದ್ಧಿಯೂ ಆಗಿದೆ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯ ಬಗ್ಗೆ‌ ದೂರದೃಷ್ಟಿ ಹೊಂದಿದ್ದಾರೆ. ಹೊಸದಾಗಿ ಉದ್ಯೋಗಕ್ಕೆ‌ ಸೇರಿದವರು ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ‌ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಶೋಭಾ ಕರಂದ್ಲಾಜೆ‌ ಅವರು ಸಾಂಕೇತಿಕವಾಗಿ 25 ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.

ಶಾಸಕ‌ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ‌ ಹೊರಟ್ಟಿ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ರಾಜ್ಯ‌ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ‌ ಅಷ್ಟಗಿ, ನೈರುತ್ಯ ರೈಲ್ವೆ ಪ್ರಧಾ‌ನ ವ್ಯವಸ್ಥಾಪಕ ಸಂಜೀವ್ ಕಿಶೋರ್, ಮೇಯರ್ ಈರೇಶ ಅಂಚಟಗೇರಿ ಇದ್ದರು.


Spread the love