ಮುಂದಿನ ಚುನಾವಣೆಗಳಲ್ಲಿ ಬಿಎಸ್ ಪಿ ಸ್ವತಂತ್ರ ಸ್ಪರ್ಧೆ

Spread the love

ಮುಂದಿನ ಚುನಾವಣೆಗಳಲ್ಲಿ ಬಿಎಸ್ ಪಿ ಸ್ವತಂತ್ರ ಸ್ಪರ್ಧೆ

ರಾಮನಗರ: ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬಿಎಸ್‌ಪಿ ರಾಮನಗರ ವಿಧಾನಸಭಾ ಕ್ಷೇತ್ರದ ಶಾಖೆ ವತಿಯಿಂದ ಆಯೋಜಿಸಿದ್ದ ಕ್ಷೇತ್ರ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆ ಮತ್ತು ಪಕ್ಷದ ಬೆಂಬಲಿತ ತೋಕಸಂದ್ರ ಗ್ರಾಪಂ ಉಪಾಧ್ಯಕ್ಷೆ ಹೇಮಲತಾ ಅಶ್ವತ್ಥ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಹೊರಗೆಡವಿದ್ದಾರೆ.

ಮುಂದಿನ ವಿಧಾನಸಭಾ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿರುವ ಕಾರಣದಿಂದ ಬಹುಜನ ಸಮಾಜ ಪಾರ್ಟಿ ಈ ಬಾರಿಯ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಲಿದೆ. ಹೀಗಾಗಿ ಪಕ್ಷ ಸಂಘಟನೆ ಉದ್ದೇಶದಿಂದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಮರ್ಥ ಅಭ್ಯರ್ಥಿಗಳನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಕಳೆದ ಮೂರು ಅವಧಿಯಿಂದ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯ ಸ್ಪರ್ಧೆಗೆ ಅವಕಾಶವೇ ಸಿಕ್ಕಿಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷದೊಂದಿಗೆ ಮೈತ್ರಿ ಸಾಧಿಸಿ ಗೆಲುವು ಸಾಧಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಎಸ್‌ಪಿ ಮೈತ್ರಿಯಿಂದ ಜೆಡಿಎಸ್‌ಗೆ ಹಾನಿಯಾಯಿತು ಎಂದು ಹೇಳುತ್ತಿದ್ದಾರೆ. ಅವರು ಎಂದೂ ನುಡಿದಂತೆ ನಡೆದವರಲ್ಲ. ಅವರಿಗೆ ನಮ್ಮ ಪಕ್ಷದ ಸಾಮರ್ಥ್ಯ ಏನೆಂಬುದನ್ನು ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ತೋರಿಸುತ್ತೇವೆ ಎಂದು ಗುಡುಗಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತಗೊಂಡಿವೆ. ಕಾಂಗ್ರೆಸ್ ನಲ್ಲಿ ಅಣ್ಣ ಶಾಸಕನಾಗಿದ್ದರೆ, ಸಹೋದರ ಸಂಸದ, ಭಾಮೈದ ಎಂಎಲ್‌ಸಿ, ಚಿಕ್ಕಪ್ಪನ ಮಗ ಜಿಪಂ ಸದಸ್ಯ ಆಗಿದ್ದಾರೆ. ಜೆಡಿಎಸ್ ನಲ್ಲಿ ಪತಿ-ಪತ್ನಿ ಶಾಸಕರಾಗಿದ್ದು, ಈಗ ಮಗನನ್ನು ತಯಾರಿ ಮಾಡುತ್ತಿದ್ದಾರೆ ಎಂದು ನಾಗೇಶ್ ವಾಗ್ದಾಳಿ ನಡೆಸಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಕ್ಕೆ ತಿಂಗಳ ಅತಿಥಿಯಂತೆ ಆಗಮಿಸುತ್ತಾರೆ. ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಜನರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸುವ ಸೌಜನ್ಯವನ್ನು ತೋರುತ್ತಿಲ್ಲ. ಕ್ಷೇತ್ರದಲ್ಲಿನ ಒಂದೇ ಒಂದು ಸಮಸ್ಯೆಯನ್ನು ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿದ ಉದಾಹರಣೆ ಇಲ್ಲ ಎಂದು ಟೀಕಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೆಸರಿಗಷ್ಟೇ ಜಾತ್ಯತೀತ ಪಕ್ಷಗಳಾಗಿವೆ. ಆ ಎರಡು ಪಕ್ಷಗಳು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ದಲಿತರನ್ನು ಮೋಸ ಮಾಡುತ್ತಲೇ ಬಂದಿವೆ. ಬಡವರ್ಗಗಳು ಬದುಕಲು ಸಾಧ್ಯವಾಗದ ಪರಿಸ್ಥಿತಿಯನ್ನು ಕ್ಷೇತ್ರದಲ್ಲಿ ಸೃಷ್ಟಿಸಿದ್ದಾರೆ. ಕೇವಲ ಮತಗಳನ್ನು ಪಡೆದು ಕ್ಷೇತ್ರವನ್ನು ತಬ್ಬಲಿ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಶೋಷಿತರು, ದಲಿತರು, ರೈತರು, ಬಡವರು ಹಾಗೂ ಕಾರ್ಮಿಕರ ಪರವಾಗಿ ಬಿಎಸ್‌ಪಿ ಕಾನೂನು ಪ್ರಕಾರ ಹೋರಾಟ ನಡೆಸುತ್ತಾ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಪಕ್ಷ ಸಂಘಟನೆ ಉದ್ದೇಶದಿಂದ ಮುಂಬರುವ ಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ನಾಗೇಶ್ ಹೇಳಿದರು. ಇದೇ ಸಂದರ್ಭದಲ್ಲಿ ತೂಕಸಂದ್ರ ಗ್ರಾಪಂ ಉಪಾಧ್ಯಕ್ಷೆ ಹೇಮಲತಾ ಅಶ್ವತ್ಥ್ ಅವರನ್ನು ಅಭಿನಂದಿಸಲಾಯಿತು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ, ಬಿಎಸ್‌ಪಿ ರಾಮನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿ.ಸ್ವಾಮಿ, ಜಿಲ್ಲಾ ಸಂಯೋಜಕರಾದ ನೇರಳಹಳ್ಳಿ ದೊಡ್ಡಿ ಕೃಷ್ಣಪ್ಪ, ಅಶ್ವತ್ಥ್ , ಜಿಲ್ಲಾ ಉಪಾಧ್ಯಕ್ಷ ಅಬ್ದುಲ್‌ರಹೀಂ, ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಾಚಲ, ಜಿಲ್ಲಾ ಸಂಯೋಜಕ ಗುರುಪ್ರಸಾದ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಗೌರಮ್ಮ ಇದ್ದರು.


Spread the love