
ಮುಂದಿನ ತಿಂಗಳಿಂದ ಟೋಲ್ ದುಬಾರಿ; ಟೋಲ್ ಶುಲ್ಕ ಶೇ.5-10ರಷ್ಟು ಹೆಚ್ಚಳಕ್ಕೆ ಚಿಂತನೆ
ನವದೆಹಲಿ: ಮುಂದಿನ ತಿಂಗಳಿಂದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚಾರ ದುಬಾರಿಯಾಗಲಿದೆ. ಏ.1ರಿಂದ ಟೋಲ್ ಶುಲ್ಕವನ್ನು ಏರಿಕೆ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಸಿದ್ಧತೆ ನಡೆಸಿದ್ದು, ಟೋಲ್ ದರವು ಶೇ.5ರಿಂದ ಶೇ.10ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ(ದರ ಮತ್ತು ಸಂಗ್ರಹ) ನಿಯಮಗಳ ಪ್ರಕಾರ, ಪ್ರತಿ ವರ್ಷವೂ ಟೋಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಇದೇ ತಿಂಗಳ 25ರೊಳಗಾಗಿ ಹೆದ್ದಾರಿ ಪ್ರಾಧಿಕಾರದ ಯೋಜನೆ ಅನುಷ್ಠಾನ ಘಟಕ(ಪಿಐಯು)ವು ಪರಿಷ್ಕೃತ ಟೋಲ್ ದರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಏ.1ರಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಟೋಲ್ ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವವರಿಗೆ ನೀಡಲಾಗುವ ಮಾಸಿಕ ಪಾಸ್ ದರವೂ ಶೇ.10ರಷ್ಟು ಏರಿಕೆಯಾಗಲಿದೆ. ಪ್ರಸ್ತುತ ಇಂಥ ಪಾಸ್ ದರ ಮಾಸಿಕ 315 ರೂ. ಇದೆ.
2022ರಲ್ಲಿ ಟೋಲ್ ತೆರಿಗೆ ದರವನ್ನು ಶೇ.10ರಿಂದ 15ರಷ್ಟು ಹೆಚ್ಚಳ ಮಾಡಲಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್ಲ ವಿಧದ ವಾಹನಗಳ ಟೋಲ್ ದರ 10ರೂ.ಗಳಿಂದ 60ರೂ.ಗಳವರೆಗೆ ಏರಿಕೆಯಾಗಿತ್ತು. ಪ್ರಸ್ತುತ, ಎಕ್ಸ್‌ಪ್ರೆಸ್‌ವೇಗಳಲ್ಲಿ ಕಿಲೋಮೀಟರ್‌ಗೆ 2.19ರೂ.ಗಳಂತೆ ಟೋಲ್ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಮಾಹಿತಿಯಂತೆ, ಕಳೆದ ವರ್ಷ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಫಾಸ್ಟಾಗ್ ಮೂಲಕ 50,855 ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ ದಿನವೊಂದಕ್ಕೆ ಸರಾಸರಿ 139.32 ಕೋಟಿ ರೂ. ಸಂಗ್ರಹಿಸಲಾಗಿತ್ತು.
ಎಷ್ಟು ಹೆಚ್ಚಳವಾಗಬಹುದು? (ಪ್ರತಿ ಟ್ರಿಪ್‌ಗೆ)
ಕಾರು, ಲಘು ವಾಹನಗಳು ಶೇ.5
ಭಾರೀ ವಾಹನಗಳು ಶೇ.10
ಮಾಸಿಕ ಪಾಸ್ ಶೇ.10