ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ – ಬಿ.ಎಮ್ ಸುಕುಮಾರ್ ಶೆಟ್ಟಿ

Spread the love

ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ – ಬಿ.ಎಮ್ ಸುಕುಮಾರ್ ಶೆಟ್ಟಿ

ಕುಂದಾಪುರ: ಬೈಂದೂರಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷ ಕಟ್ಟಿದ ನನ್ನನ್ನು ಜೋರಾಗಿದ್ದೇನೆ, ಸಮರ್ಥತೆ ಇದೆ ಎಂದು ತುಳಿದು ಹಾಕಿದ್ದಾರೆ. ಯಾರು ಸಮರ್ಥರಿರುತ್ತಾರೋ ಅವರಿಗೆ ಬಿಜೆಪಿಯಲ್ಲಿ ಜಾಗ ಇಲ್ಲ. ಇನ್ನುಮುಂದೆ ಇಂತಹ ಪಕ್ಷದ ನಾಯಕನಾಗಿ ನಾನಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಬೈಂದೂರಿನ ಮಾಜಿ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಭವಿಷ್ಯ ನುಡಿದಿದ್ದಾರೆ.

ನೆಂಪುವಿನ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಡಿತದಲ್ಲಿದ್ದ ಬೈಂದೂರನ್ನು ಬಿಜೆಪಿ ಹಿಡಿತಕ್ಕೆ ತಂದಿದ್ದೇನೆ. 25,000 ಮತಗಳ ಅಂತರದಿಂದ ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದೆ. ಬೆಳೆಯುವ ನಾಯಕರ ಕಾಲೆಳೆಯುವುದು ಬಿಜೆಪಿಯ ಪರಿಪಾಠ. ಕಳೆದ ಚುನಾವಣೆಯಲ್ಲಿ ಕಾರಣಗಳಿಲ್ಲದೇ ನನಗೆ ಸೀಟನ್ನು ನಿರಾಕರಿಸಿದರು. ಬೈಂದೂರಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನನ್ನನ್ನು ಮೂಲೆಗುಂಪು ಮಾಡಿದರು. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಮನಸ್ಸಿಗೆ ಆಘಾತವಾಗಿದೆ ಎಂದು ನೋವು ತೋಡಿಕೊಂಡರು.

ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿಯವರು ಹಾಗ್ ಮಾಡ್ತೇನೆ, ಹೀಗ್ ಮಾಡ್ತೇನೆ ಅಂತ ಸುಮ್ ಸುಮ್ನೆ ಬಟಾಟೆ ಒಡಿತಾರೆ. ಅವರಲ್ಲಿ ಏನೂ ಮಾಡೋದಕ್ಕೆ ಆಗೋದಿಲ್ಲ. ಜನಮನವನ್ನು ಗೆಲ್ಲಲು ಸಾಧ್ಯವಿಲ್ಲ. ಕರಾವಳಿ ಬಿಟ್ಟರೆ ಬೇರೆಲ್ಲೆಡೆ ಬಿಜೆಪಿ ತನ್ನ ಹೆಸರನ್ನು ಹಾಳು ಮಾಡಿಕೊಂಡಿದೆ ಎಂದರು.

ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಗೋಪಾಲ ಪೂಜಾರಿ, ಶೃಂಗೇರಿ ಶಾಸಕರ ಜೊತೆಗೆ ಡಿಕೆಶಿ ಭೇಟಿಯಾಗಿದ್ದೇನೆ. ಡಿಕೆ ಆಹ್ವಾನ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಸೇರುತ್ತೇನೆಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದೇನೆ. ದೊಡ್ಡ ಮಟ್ಟದಲ್ಲಿ ಸಮಾರಂಭ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ. ಬೈಂದೂರಲ್ಲಿ ಪಕ್ಷ ಕಟ್ಟಿದ್ದೇನೆ, ನನ್ನನ್ನು ತುಳಿದು ಹಾಕಿದ್ದಾರೆ ಎಂದರು.


Spread the love

Leave a Reply

Please enter your comment!
Please enter your name here