ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ:- ಕೆ.ಹರೀಶ್ ಕುಮಾರ್

Spread the love

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ:- ಕೆ.ಹರೀಶ್ ಕುಮಾರ್

ಮಂಗಳೂರು: ಇತ್ತೀಚಿಗೆ ನಡೆದ ವಿಧಾನ ಸಭಾ ಉಪಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಗಮನಾರ್ಹ ಗೆಲುವು ಸಾಧಿಸಿದ್ದು, ಸಿಂದಗಿ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಪಕ್ಷವು 40 ಸಾವಿರ ಅಧಿಕ ಮತಗಳನ್ನು ಪಡೆದಿದ್ದು ಜನರು ಕಾಂಗ್ರೆಸಿನತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷವು ಮರಳಿ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿದ ಜಿಲ್ಲಾ ಕಾಂಗ್ರೆಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿಯ ದುರಾಡಳಿತದಿಂದಾಗಿ ಬೆಲೆಯೇರಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳು ತಲೆದೋರಿದ್ದು, ಜನರು ಇದರಿಂದ ರೋಸಿ ಹೋಗಿದ್ದಾರೆ. ಅನೈತಿಕ ಪೊಲೀಸ್ ಗಿರಿಯಿಂದಾಗಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದನ್ನು ಜಿಲ್ಲಾ ಕಾಂಗ್ರೆಸ್ ಕಟು ಶಬ್ದಗಳಲ್ಲಿ ಖಂಡಿಸುತ್ತದೆ ಎಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ಅನೈತಿಕ ಗೂಂಡಾಗಿರಿಯ ವಿರುದ್ಧ ಜಿಲ್ಲಾ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದ್ದು, ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧವಾಗಿದೆ ಎಂದು ನುಡಿದರು.

ಸಭೆಯ ಆರಂಭದಲ್ಲಿ ಇತ್ತೀಚಿಗೆ ಅಗಲಿದ ಪಕ್ಷದ ಹಿರಿಯರಾದ ಸದಾನಂದ ಮಲ್ಲಿ ಹಾಗೂ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು ಎಂದು ಸಭೆಯಲ್ಲಿ ಪ್ರಕಟಿಸಲಾಯಿತು. ಇತ್ತೀಚಿಗೆ ಐವರ್ನಾಡ್ ನಲ್ಲಿ ಪ್ರವಾದಿ ಪೈಗಂಬರ್ ರವರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಖಂಡನಾ ನಿರ್ಣಯಗಳನ್ನು ಕೈಗೊಳ್ಳಲಾಗುವುದೆಂದು ಸಭೆಯಲ್ಲಿ ತಿಳಿಸಲಾಯಿತು. ಚೈತ್ರಾ ಕುಂದಾಪುರ ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರ ವಿರುದ್ಧ ಪ್ರಚೋದಕಾರಿ ಭಾಷಣ ಮಾಡಿದ್ದು, ಕಾಂಗ್ರೆಸ್ ವತಿಯಿಂದ ತೀವ್ರ ಪ್ರತಿಭಟನೆಯ ಎಚ್ಚರಿಕೆ ನೀಡಲಾಗುವುದೆಂದು ಅವರು ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಜೆ.ಆರ್.ಲೋಬೊ, ಎಐಸಿಸಿ ಕಾರ್ಯದರ್ಶಿಗಳಾದ ಐವನ್ ಡಿಸೋಜಾ, ಪಿ.ವಿಮೋಹನ್, ಮಾಜಿ ಸಂಸದ ಬಿ.ಇಬ್ರಾಹೀಂ, ಮುಖಂಡರಾದ ಮಿಥುನ್ ರೈ, ಕೋಡಿಜಾಲ್ ಇಬ್ರಾಹೀಂ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಬ್ಲಾಕ್ ಅಧ್ಯಕ್ಷರು, ಕೆಪಿಸಿಸಿಯ ಮಾಜಿ ಪದಾಧಿಕಾರಿಗಳು- ಕೋರ್ಡಿನೇಟರ್ಸ್, ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಾಧ್ಯಕ್ಷರುಗಳು-ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ನಾಯಕಿಯರು, ಎನ್.ಎಸ್.ಯು.ಐ ಅಧ್ಯಕ್ಷರು, ಪಕ್ಷದ ನಾಯಕರುಗಳು, ಮುಖಂಡರುಗಳು ಉಪಸ್ಥಿತರಿದ್ದರು.


Spread the love