
ಮುಖ್ಯಮಂತ್ರಿ ಗಳ ಚೊಚ್ಚಲ ಬಜೆಟ್ ನಲ್ಲಿ ಉಡುಪಿ ಜಿಲ್ಲೆಗೆ ಅನ್ಯಾಯ – ಸಿಪಿಐ (ಎಂ)
ಉಡುಪಿ: ಹಿಂದೊಮ್ಮೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು ತನ್ನ ಚೊಚ್ಚಲ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಜನತೆಯನ್ನು ಮರೆತು ಬಿಟ್ಟಿದ್ದಾರೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ
ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾದ ಪೂರ್ಣ ಪ್ರಮಾಣದ ಸರಕಾರಿ ಮೆಡಿಕಲ್ ಕಾಲೇಜು ಘೋಷಣೆ ಆಗಿಲ್ಲ. 2,66,000 ಕೋಟಿ ರೂಪಾಯಿ ಬಜೆಟ್ ನಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ 30 ಕೋಟಿ ತೆಗೆದಿರಿಸಿದ್ದರೆ ಅದನ್ನು ಪುನರುಜ್ಜೀವನ ಗೊಳಿಸಲು ಸಾಧ್ಯವಿತ್ತು. ಅದರ ಪ್ರಸ್ತಾಪ ಇಲ್ಲ. ಯುವಜನರಿಗೆ ಉದ್ಯೋಗ ಒದಗಿಸುವ ಹೊಸ ಉದ್ದಿಮೆ/ಕೈಗಾರಿಕೆಗಳ ಸ್ಥಾಪನೆ ಘೋಷಿಸಿಲ್ಲ. ಬಿಕ್ಕಟ್ಟಿನಲ್ಲಿರುವ ಹಂಚು ಕೈಗಾರಿಕೆಯನ್ನು ರಕ್ಷಿಸಲು ಯಾವುದೇ ಕ್ರಮಗಳಿಲ್ಲ. ಎಲ್ಲಾ ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ನಿರ್ಮಾಣದ ಘೋಷಣೆ ಆಗಿದ್ದರೂ, ಸರಕಾರದ, ಅಂದರೆ ಜನತೆಯ ನೆಲ, ಜಲವನ್ನು ಖಾಸಗಿ ಉದ್ದಿಮೆದಾರರಿಗೆ ಧಾರೆ ಎರೆಯುವ ಹುನ್ನಾರವಾಗಿದೆ
ಇಬ್ಬರು ಮಂತ್ರಿಗಳೂ ಸೇರಿದಂತೆ 6 ಶಾಸಕರನ್ನು ಹೊಂದಿರುವ ಬಿಜೆಪಿ ತನ್ನದೇ ಸರಕಾರದ ಮೇಲೆ ಪ್ರಭಾವ ಬೀರಲು ವಿಫಲವಾಗಿದೆ ಎಂದು ಸಿಪಿಐ(ಎಂ) ಆಪಾದಿಸಿದೆ. ಒಟ್ಟಾರೆಯಾಗಿ ಜಿಲ್ಲೆಯ ಜನತೆಗೆ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ.