
ಮುದೂರು ಹಾಗೂ ಕೆರಾಡಿ ಭಾಗಗಳಲ್ಲಿ ಸರ್ಕಾರಿ ಬಸ್ ಅವ್ಯವಸ್ಥೆ ಸರಿಪಡಿಸುವಂತೆ ವಿದ್ಯಾರ್ಥಿಗಳ ಪ್ರತಿಭಟನೆ
ಕುಂದಾಪುರ : ತಾಲೂಕಿನ ಮುದೂರು ಹಾಗೂ ಕೆರಾಡಿ ಭಾಗಗಳಲ್ಲಿ ಸರ್ಕಾರಿ ಬಸ್ ಅವ್ಯವಸ್ಥೆ ಖಂಡಿಸಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ನಗರದ ಕೆಎಸ್ಆರ್ ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸಿದರು.
ಕೊಲ್ಲೂರು ಪರಿಸರದ ಮಲೆನಾಡಿನ ತೀರಾ ಗ್ರಾಮೀಣ ಭಾಗದಿಂದ ವಿದ್ಯಾರ್ಜನೆಗಾಗಿ ಹೆಣ್ಣು ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಸರ್ಕಾರಿ ಬಸ್ಸುಗಳಲ್ಲಿ ಕುಂದಾಪುರಕ್ಕೆ ಬರುತ್ತಿದ್ದಾರೆ. ಬಸ್ಸಿನ ವೇಳಾಪಟ್ಟಿಯಲ್ಲಿ ಆಗ್ಗಾಗ್ಗೆ ಆಗುವ ವ್ಯತ್ಯಯದಿಂದಾಗಿ ಕತ್ತಲಾದರೂ ವಿದ್ಯಾರ್ಥಿಗಳು ಮನೆಗೆ ಸೇರಲು ಸಾಧ್ಯಗುತ್ತಿಲ್ಲ. ಬಸ್ಸು ಇಳಿದು 2-3 ಕಿ.ಮೀ ದೂರವನ್ನು ಕಾಡು ಪ್ರದೇಶ, ಕಾಲು ಸಂಕ, ನದಿ, ತೋಡು ದಾಟಿ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಅಳಲು ತೋಡಿಕೊಂಡ ವಿದ್ಯಾರ್ಥಿಗಳು 5 ದಿನಗಳ ಒಳಗೆ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಮುದೂರು ಮತ್ತು ಕೆರಾಡಿ ಭಾಗಕ್ಕೆ ಸಂಜೆ 4:30ಗೆ ಇದ್ದ ಬಸ್ಸಿನ ವೇಳಾಪಟ್ಟಿಯನ್ನು 5.15 ಕ್ಕೆ ಮಾಡಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ವಿದ್ಯಾರ್ಥಿಗಳು ಇದೇ ಸಂದರ್ಭ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಕವಿತಾ ಆಚಾರ್ಯ ಅವರು, ಬಸ್ಸಿನಲ್ಲಿ ಬರುವ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಪಡೆದುಕೊಳ್ಳದೆ ಏಕಾಏಕಿ ಬಸ್ಸಿನ ವೇಳಾಪಟ್ಟಿ ಬದಲಾಯಿಸುವ ಅಗತ್ಯ ಏನಿತ್ತು. ಕತ್ತಲೆಯಲ್ಲಿ ಕಾಡಿನ ದಾರಿಯಲ್ಲಿ ಸಾಗುವ ವಿದ್ಯಾರ್ಥಿನಿಯರಿಗೆ ಹೇಳಿಕೊಳ್ಳಲಾಗದ ಸಮಸ್ಯೆಗಳಿರುತ್ತದೆ ಇದನ್ನು ಯಾರಲ್ಲಿ ಹೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇಲ್ಲಿಗೆ ಬರಲಿ ನಮ್ಮ ಸಮಸ್ಯೆ ಅವರಿಗೆ ಹೇಳಿಕೊಳ್ಳುತ್ತೇವೆ ಎಂದರು.
ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಕೆಎಸ್ಆರ್ ಟಿಸಿ ಯ ಸ್ಥಳೀಯ ಅಧಿಕಾರಿಗಳು, ಸಮಸ್ಯೆಯ ಅರಿವು ನಮಗಿದೆ ಆದರೆ ಸಾರಿಗೆ ಪ್ರಾಧಿಕಾರದ ಅನುಮತಿಯಂತೆ ನಾವು ಬಸ್ಸು ಓಡಾಟ ನಡೆಸಬೇಕಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾತ್ಕಾಲಿಕ ಪರ್ಮಿಟ್ ಗೆ ಮನವಿ ಮಾಡಿದ್ದರೂ ಇನ್ನೂ ಅನುಮತಿ ದೊರಕಿಲ್ಲ. ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಬೈಂದೂರು ಶಾಸಕರ ಸ್ಪಂದನೆ:
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿರುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಯತ್ನ ಮಾಡುತ್ತೇನೆ ಹಾಗೂ ನಿಮ್ಮೊಂದಿಗೆ ಇರುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.