
ಮುಲಾಯಂ ಸಿಂಗ್ ಗೆ ಪದ್ಮವಿಭೂಷಣಕ್ಕೆ ಆಯ್ಕೆ: ಪ್ರಶಸ್ತಿಗೆ ಕಪ್ಪು ಚುಕ್ಕೆ – ಪ್ರಮೋದ್ ಮುತಾಲಿಕ್
ಉಡುಪಿ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಮೂರು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರಿಗೆ ಕೇಂದ್ರ ಸರ್ಕಾರವು ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿರುವುದು ಇದೀಗ ರಾಮ ಭಕ್ತರಲ್ಲಿ ಅಸಮಾಧಾನ ಉಂಟು ಮಾಡಿದೆ. ಕೂಡಲೇ ಪ್ರಶಸ್ತಿಯನ್ನು ಹಿಂಪಡೆಯುವಂತೆ ಆಗ್ರಹಿಸಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಕೇಂದ್ರ ಪ್ರಶಸ್ತಿ ಸಮಿತಿ ನಡೆಯ್ನನು ಖಂಡಿಸಿದರು. ಮುಲಾಯಂ ಸಿಂಗ್, ರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಮಾತನಾಡಿದ ಅವರು, 1989-91ರ ಅವಧಿಯಲ್ಲಿ ಅಯೋಧ್ಯೆ ಶ್ರೀರಾಮ ಕರಸೇವಕರಿಗೆ ಹಿಂಸೆ ನೀಡಿದ್ದಾರೆ. ಶಾಂತಿಯುತ ಪ್ರತಿಭಟನೆಗಾಗಿ ಅಯೋಧ್ಯೆಗೆ ಬಂದಿದ್ದ ಶ್ರೀರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಕ್ರೂರಿ ಮುಲಾಯಂ ಸಿಂಗ್ ಯಾದವ್, ರಾಮ ವಿರೋಧಿ ಹಾಗೂ ಧರ್ಮ ವಿರೋಧಿ ಮಾತ್ರವಲ್ಲ ದೇಶದ್ರೋಹಿ. ಅಂಥವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವುದೆಂದರೆ ಆ ಪ್ರಶಸ್ತಿಗೇ ಕಳಂಕ ಎಂದರು.
ಮುಲಾಯಂ ಸಿಂಗ್ ಯಾದವ್ಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿರುವುದು ಅತ್ಯಂತ ಶ್ರೇಷ್ಠ ಪ್ರಶಸ್ತಿಗೆ ಇದೊಂದು ಕಪ್ಪು ಚುಕ್ಕೆಯಾಗಿದೆ. ಪ್ರತಿಷ್ಠಿತ ಪ್ರಶಸ್ತಿಗೆ ಮುಲಾಯಂ ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ಧಿಕ್ಕಾರ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಜೈಲಿಗೆ ತಳ್ಳಲು ಯತ್ನಿಸಿದ್ದರು. ಯೋಗಿಯನ್ನು ಎನ್ಕೌಂಟರ್ ಮಾಡಲು ಹೊರಟ ವ್ಯಕ್ತಿಯಾಗಿದ್ದಾರೆ. ಯೋಗಿಯವರನ್ನು ಸಂಸತ್ ಭವನದಲ್ಲಿ ಕಣ್ಣೀರು ಹಾಕಿಸಿದ ವ್ಯಕ್ತಿ. ಇಂತಹಾ ವ್ಯಕ್ತಿಗೆ ಪದ್ಮವಿಭೂಷಣ ನೀಡಿರುವುದು ಅಕ್ಷಮ್ಯ ಎಂದರು.