ಮುಲ್ಕಿ ಕಂಬಳ ಬಹುಮಾನ ಗೆದ್ದ ಕೋಣದ ಮಾಲಕರಿಗೆ ಹಣಕ್ಕಾಗಿ ಪೀಡನೆ: ಮೂವರು ಆರೋಪಿಗಳ ವಿರುದ್ದ ಕೋಕಾ ಕಾಯ್ದೆ
ಮುಲ್ಕಿ: ಮುಲ್ಕಿಯ ಅರಸು ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮಾಲಕರಿಗೆ ಹಣ ಹಾಗೂ ಬಂಗಾರದ ಸರ ನೀಡುವಂತೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆಯಲ್ಲಿ ನಡೆದಿದೆ.

ಅಂಗಾರಗುಡ್ಡೆ ಕೆಂಚನಕೆರೆ ನಿವಾಸಿ ಶಂಸುದ್ದೀನ್ ಅವರ ಮನೆಗೆ ನುಗ್ಗಿದ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಹಾಗೂ ಸುವೀನ್ ಕಾಂಚನ್ ಎಂಬ ಮೂವರು ಆರೋಪಿಗಳು, “ದನಗಳನ್ನು ಕಡಿಯಲು ಕೊಡ್ತೀಯಲ್ವಾ” ಎಂದು ಹಫ್ತಾ ಹಣ ಕೇಳಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮುಂಬಯಿಯಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ, ಜಾಗ ಹಾಗೂ ಮನೆಯನ್ನು ಶಂಸುದ್ದೀನ್ ಅವರು ನೋಡಿಕೊಳ್ಳುತ್ತಿದ್ದು, ಇತ್ತೀಚೆಗೆ ಮುಲ್ಕಿಯ ಅರಸು ಕಂಬಳದಲ್ಲಿ ಶಂಸುದ್ದೀನ್ ತಂದಿದ್ದ ಕೋಣಗಳಿಗೆ ಬಹುಮಾನ ಲಭಿಸಿತ್ತು.
ಈ ಬಹುಮಾನದ ಹಿನ್ನೆಲೆಯಲ್ಲಿ ಆರೋಪಿಗಳು ಹಣ ಹಾಗೂ ಬಂಗಾರದ ಸರ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡ ಮುಲ್ಕಿ ಪೊಲೀಸರು ತನಿಖೆ ನಡೆಸಿ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ್ ಪೂಜಾರಿ ಹಾಗೂ ಸುವೀನ್ ಕಾಂಚನ್ ಅವರನ್ನು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ, ಪೊಲೀಸರು KOC Act ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಕುರಿತು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.