
ಮೂಡುಬಿದಿರೆ: ಕೇಳಿದಾಗ ಮೊಬೈಲ್ ಕೊಡಲಿಲ್ಲ ಎಂದು ಬಾವಿಗೆ ಹಾರಿದ ಹೈಸ್ಕೂಲ್ ವಿದ್ಯಾರ್ಥಿನಿ
ಮೂಡುಬಿದಿರೆ: ತಾನು ಕೇಳಿದಾಗ ತಾಯಿ ಮೊಬೈಲ್ ಕೊಡಲಿಲ್ಲ ಎನ್ನುವ ಸಿಟ್ಟಿನಲ್ಲಿ ತಂದೆ-ತಾಯಿ ಹೊರಗೆ ಹೋಗಿದ್ದ ವೇಳೆ ಅಪ್ರಾಪ್ತ ವಯಸ್ಕ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ರವಿವಾರ ನಡೆದಿದೆ.
ಉಮೇಶ್ ಪೂಜಾರಿ ಅವರ ಪುತ್ರಿ ಯುತಿ (15) ಆತ್ಮಹತ್ಯೆ ಮಾಡಿಕೊಂಡಾಕೆ. ಆಕೆ ಅಳಿಯೂರು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ.
ರವಿವಾರ ಬೆಳಗ್ಗೆ ತಂದೆ ಕೂಲಿ ಕೆಲಸಕ್ಕೆಂದು ಹೊರಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೊರಟು ಹಿರಿಯ ಮಗಳು ಯುತಿಯನ್ನು ಕೂಡ ಬರಲು ಹೇಳಿದಾಗ ನನಗೆ ಬರೆಯಲು ಇದೆ. ನಾನು ಬರುವುದಿಲ್ಲ ಎಂದ ಅವಳು ತಾಯಿಯ ಕೈಯಲ್ಲಿದ್ದ ಮೊಬೈಲ್ ಕೊಡುವಂತೆ ಕೇಳಿದ್ದಳು. ಮೊಬೆ„ಲ್ ಈಗ ಕೊಡುವುದಿಲ, ಶಿರ್ತಾಡಿಯಿಂದ ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ತಾಯಿ ಹಾಗೂ ಕಿರಿಯ ಮಗಳು ಹೊರಟು ಹೋದರೆನ್ನಲಾಗಿದೆ. ಮಧ್ಯಾಹ್ನ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹುಡುಕಾಡಿದಾಗ ಅಪರಾಹ್ನ ಸುಮಾರು 4 ಗಂಟೆ ಹೊತ್ತಿಗೆ ಮನೆ ಹತ್ತಿರದ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಓದಿನಲ್ಲಿ ಪ್ರತಿಭಾನ್ವಿತಳಾಗಿದ್ದ ಯುತಿ ಪಠ್ಯೇತರ ವಿಷಯಗಳಲ್ಲೂ ಮುಂದಿದ್ದಳು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.