ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದಿಂದ ದಿಟ್ಟ ಕ್ರಮ: ಸಚಿವ ಎಸ್ ಅಂಗಾರ

Spread the love

ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದಿಂದ ದಿಟ್ಟ ಕ್ರಮ: ಸಚಿವ ಎಸ್ ಅಂಗಾರ

ಕುಂದಾಪುರ: ಮಲೆನಾಡಿಗೆ ಹೊಂಡಿದಕೊಂಡಿರುವ ಬೈಂದೂರು ಭಾಗದದಲ್ಲಿ ಅನೇಕ ಹಳ್ಳಗಳಿದ್ದು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಕಿರು ಸೇತುವೆ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುವುದು. ಜೊತೆಗೆ ಈ ಭಾಗಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.

ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾಗಿ ಸಾವನ್ನಪ್ಪಿರುವ ಬಾಲಕಿ ಸನ್ನಿಧಿ (7) ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಬುಧವಾರ ಭೇಟಿ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಂದೆಂದೂ ಇಂತಹ ಘಟನೆಗಳು ಜರುಗದಂತೆ ಜಿಲ್ಲಾಡಳಿತ ದಿಟ್ಟ ಕ್ರಮ ಕೈಗೊಳ್ಳಲಿದ್ದು, ನರೇಗಾ ಯೋಜನೆಯಡಿ ಎಲ್ಲೆಲ್ಲಿ ಇಂತಹ ಕಿರು ಸೇತುವೆಗಳ ಅಗತ್ಯತೆ ಇದೆ ಎನ್ನುವುದನ್ನ ಪಟ್ಟಿ ಮಾಡಿ ಅದನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ನಿರ್ಧಾರವನ್ನು ಕೈಗೊಂಡಿದ್ದಾರೆ. ಪ್ರಾಕೃತಿಕ ವಿಕೋಪಗಳು ಯಾವ ಹಂತದಲ್ಲಿ ನಡೆಯುತ್ತದೆ ಎನ್ನುವುದು ಮುಂಚಿತವಾಗಿ ಹೇಳಲು ಸಾಧ್ಯವಿಲ್ಲ. ಘಟನೆ ನಡೆದಿದ್ದು ಅದಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಶಾಸಕ ಸುಕುಮಾರ್ ಶೆಟ್ಟಿ ಮಾತನಾಡಿ ಬೈಂದೂರಿನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಕಾಲು ಸಂಕಗಳಿವೆ. ಪ್ರತಿ ಹಳ್ಳಿಗಳಲ್ಲಿ ಇಂತಹ ತೋಡುಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಈಗಾಗಲೇ 150ಕ್ಕೂ ಹೆಚ್ಚು ಕಾಲು ಸಂಕಗಳನ್ನು ಮಾಡಲಾಗಿದೆ. ಇನ್ನೂ ಕೂಡ ಹಲವು ಕಡೆಗಳಲ್ಲಿ ಮಾಡಲು ಬಾಕಿ ಇವೆÉ. ಈ ಒಂದೇ ಗ್ರಾಮದಲ್ಲಿ ಹಲವಾರು ತೋಡುಗಳಿದ್ದು, ಹೆಚ್ಚಿನವುಗಳಿಗೆ ಕಾಯಕಲ್ಪ ಮಾಡಲಾಗಿದೆ. ವಾಟೆಗುಂಡಿ ತೋಡಿಗೆ 11 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು ಲೊಕೋಪಯೋಗಿ ಇಲಾಖೆ ಅದರ ಕೆಲಸವನ್ನು ಮಾಡಲು ಬಾಕಿ ಇದೆ. ಅಧಿಕಾರಿಗಳು ಕ್ಲಪ್ತ ಸಮಯದಲ್ಲಿ ಅನುದಾನ ಬಳಸಿಕೊಂಡು ಕೆಲಸ ಮಾಡಿದ್ದಲ್ಲಿ ಈ ದುರಂತ ನಡೆಯುತ್ತಿರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸನ್ನಿಧಿ ಮನೆಗೆ ಬೇಟಿ ನೀಡಿದ ವೇಳೆ ಆಕೆ ತಂದೆ ಪ್ರದೀಪ್ ಪೂಜಾರಿಯವರನ್ನು ಸಂತೈಸಿದ ಬಳಿಕ ಮೂರು ವರ್ಷದ ಸನ್ನಿಧಿ ಸಹೋದರಿಯನ್ನು ಎತ್ತಿಕೊಂಡ ಶಾಸಕ ಸುಕುಮಾರ್ ಶೆಟ್ಟಿ, ಮಗುವನ್ನು ದತ್ತು ಪಡೆದುಕೊಳ್ಳುವುದಾಗಿ ಹೇಳಿದರು. ಆಕೆಯ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ನೋಡುವುದಾಗಿ ಭರವಸೆ ನೀಡಿದರು.

ಬಾಲಕಿ ಸನ್ನಿಧಿ ಕಾಲು ಜಾರಿ ಬಿದ್ದ ಕಾಲುಸಂಕಕ್ಕೆ ಈಗಾಗಲೇ ಅನುದಾನ ಮಂಜೂರಾಗಿದ್ದು, ಕಾರಣಾಂತರಗಳಿಂದಾಗಿ ಕಾಮಗಾರಿ ಆರಂಭವಾಗಿಲ್ಲ. ಕಡುಬಡತನದಲ್ಲಿರುವ ಆಕೆಯ ಕುಟುಂಬಕ್ಕೆ ಸರ್ಕಾರದಿಂದ ಅಧಿಕ ಪ್ರಮಾಣದದಲ್ಲಿ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮಡುಗಟ್ಟಿದ ಆಕ್ರೋಶ:
ಕಾಲ್ತೋಡು ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೇ ಪುತ್ರಿ ಸನ್ನಿಧಿ ನೀರುಪಾಲಾಗಿ 48 ಗಂಟೆ ಕಳೆದರೂ ಮಗುವಿನ ಸುಳಿವು ಲಭ್ಯವಾಗದ ಹಿನ್ನೆಲೆ ಕುಟುಂಬಿಕರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರಹಾಕಿದರು. ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹಾಗೂ ಶಾಸಕ ಸುಕುಮಾರ್ ಶೆಟ್ಟಿ ಭೇಟಿಯ ಬಳಿಕ ಮನೆಯವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಒಂದು ಕಾಲು ಸೇತುವೆ ಮಾಡಿಕೊಟ್ಟಿದ್ದರೆ ಮಗು ಬದುಕುತ್ತಿತ್ತು ಎಂದು ಸನ್ನಿಧಿ ಕುಟುಂಬಿಕರು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ಇದೇ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಶಾಲಾ ಬಾಲಕಿ ಸನ್ನಿಧಿ ಮನೆಗೆ ಭೇಟಿ ನೀಡಿದ ಸಚಿವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡದ ಕುರಿತು ಸನ್ನಿಧಿ ದೊಡ್ಡಮ್ಮ ಗುಲಾಬಿ ಅವರು ಸಚಿವರು ಕೇವಲ ಫೆÇೀಟೊಗೆ ಫೆÇೀಸ್ ನೀಡಲು ಬರುತ್ತಾರೆ ಅವರನ್ನು ನೀರಿಗೆ ಇಳಿಸಬೇಕು ಆಗ ಮಾತ್ರ ನಮ್ಮ ಪರಿಸ್ಥಿತಿ ಆರ್ಥವಾಗುತ್ತದೆ ಎಂದು ಮಾಧ್ಯಮದವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಮೂರು ದಿನಗಳಾದರೂ ಬಾಲಕಿ ಸನ್ನಿಧಿಯ ಪತ್ತೆಯಾಗಿಲ್ಲ. ನಾವು ಊರವರೇ ಸೇರಿ ನೀರಿಲ್ಲಿ ಹುಡುಕಾಟ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲ. ಇಂದು ಲೈಫ್ ಜಾಕೆಟ್ ನೀಡಿದ್ದಾರೆ ಹೊರತು ಬೇರೆ ಯಾವುದೇ ಸಲಕರಣೆ ನೀಡಿಲ್ಲ ಸಚಿವರು ಇದೇ ರಸ್ತೆಯಲ್ಲಿ ಹೋದರೂ ಸಹ ನಮ್ಮನ್ನ ಮಾತನಾಡಿಸಿಲ್ಲ ಎಂದು ಶೋಧ ಕಾರ್ಯ ನಡೆಸುತ್ತಿರುವ ನರೇಶ್ ಕೊಡೆರಿ ಆಕ್ರೋಶ ವ್ಯಕ್ತಪಡಿಸಿದರು.


Spread the love