
ಮೂಳೂರಿನ ಕುಟುಂಬದ ಮಹಿಳೆಯರ ಮೇಲೆ ಕಾಪು ಪೊಲೀಸರಿಂದ ಹಲ್ಲೆ ಆರೋಪ ಸತ್ಯಕ್ಕೆ ದೂರವಾದುದು – ಎಸ್ಪಿ ಎನ್ ವಿಷ್ಣುವರ್ಧನ್
ಉಡುಪಿ: ಮೂಳೂರಿನ ಕುಟುಂಬವೊಂದರ ಮಹಿಳೆಯರ ಮೇಲೆ ಕಾಪು ಠಾಣಾಧಿಕಾರಿ ಮತ್ತು ಸಿಬಂದಿಗಳು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದುದು ಬದಲಾಗಿ ಸಂಬಂಧಿತ ಕುಟುಂಬದ ಮಹಿಳೆಯರೇ ಠಾಣಾಧಿಕಾರಿ ಹಾಗೂ ಇತರ ಸಿಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಹೇಳಿದ್ದಾರೆ.
ಘಟನೆಯ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಮೂಳೂರಿನ ಮನೆಯೊಂದರಲ್ಲಿ ಗೋವನ್ನು ಕಡಿದು ಮಾಂಸ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾಪು ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಮತ್ತವರ ಪುರುಷ ಹಾಗೂ ಮಹಿಳಾ ಸಿಬಂದಿ ದಾಳಿ ನಡೆಸಿದ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು, ಈ ವೇಳೆ ಸ್ಥಳದಲ್ಲಿ ಮಾಂಸ ಹಾಗೂ ಒಂದು ದನವನ್ನು ವಶಪಡಿಸಿಕೊಂಡಿದ್ದು ಈ ವೇಳೆ ಮನೆಯಲ್ಲಿದ್ದ ಮಹಿಳೆಯರು ಏಕಾಏಕಿ ಪೊಲೀಸ್ ಅಧಿಕಾರಿ ಹಾಗೂ ಇತರ ಸಿಬಂದಿಗಳ ಮೇಲೆ ದಾಳಿ ನಡೆಸಿದ್ದು, ಠಾಣಾಧಿಕಾರಿ ರಾಘವೇಂದ್ರ ಅವರ ಮೇಲೆ ನೇರವಾಗಿ ಹಲ್ಲೆ ನಡೆಸಿದ್ದಲ್ಲದೆ, ಅಧಿಕಾರಿಗಳ ವಿರುದ್ದ ಕೆಟ್ಟ ಭಾಷೆಯಲ್ಲಿ ಬೈದು ಅವಮಾನ ಮಾಡಿದ್ದಾರೆ. ಈ ಸಂಬಂಧ ಠಾಣಾಧಿಕಾರಿ ಸಂಬಂಧಿತ ಕುಟುಂಬದ ಮಹಿಳೆಯರ ವಿರುದ್ದ ಹಾಗೂ ತಪ್ಪಿಸಿಕೊಂಡ ಇಬ್ಬರು ಪುರಷರ ವಿರುದ್ದ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸಂಪೂರ್ಣ ವೀಡಿಯೋ ದಾಖಲೆ ಇದ್ದು ಕುಟುಂಬದವರ ಮೇಲೆ ಎಲ್ಲಿಯೂ ಕೂಡ ಪೊಲೀಸರು ದಾಳಿ ನಡೆಸಿರುವುದಿಲ್ಲ. ಕಾನೂನು ಪ್ರಕಾರವಾಗಿ ಕಾಪು ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಹೊರತು ಕುಟುಂಬದವರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಹಿನ್ನಲೆ ಏನು?
ಹೈನುಗಾರಿಕೆ ಮಾಡುತ್ತಿದ್ದ ಕುಟುಂಬವೊಂದರ ಮನೆಯ ಮೇಲೆ ಯುನಿಫಾರ್ಮ್ ಹಾಕದ ಕಾಪು ಠಾಣೆಯ ಪೊಲೀಸರು ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿ ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿ, ಮಹಿಳೆಯರ ಬಟ್ಟೆ ಹರಿದು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡವರು ಅಜ್ಜರ ಕಾಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಎಪಿಸಿಆರ್ ಉಡುಪಿ ಜಿಲ್ಲಾ ಘಟಕದಿಂದ ಸೂಕ್ತ ಕ್ರಮಕ್ಕೆ ಆಗ್ರಹ
ಮೂಳುರಿನ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಠಾಣಾಧಿಕಾರಿ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಡಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಎಪಿಸಿಆರ್ ಉಡುಪಿ ಜಿಲ್ಲಾ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಒತ್ತಾಯಿಸಿದ್ದಾರೆ.
ಹಲವಾರು ವರ್ಷದಿಂದ ಹೈನುಗಾರಿಕೆ ಮಾಡುತ್ತಿದ್ದ ಮುಸ್ಲಿಂ ಕುಟುಂಬವೊಂದರ ಮೇಲೆ ಕಾಪು ಪೊಲೀಸರು ವಿನಾ ಕಾರಣ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಆರೋಪವನ್ನು ಮಾಡಲಾಗಿದೆ. ಮನೆಯಲ್ಲಿ ಖಾಸಯಿಖಾನೆ ನಡೆಸಲಾಗುತ್ತದೆ ಎಂದು ಆರೋಪಿಸಿ ಇಂದು ಬೆಳಿಗ್ಗೆ ಸಮವಸ್ತ್ರ ಹಾಕದ ಆರು ಮಂದಿ ಪೊಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ಕುಟುಂಬ ಆರೋಪಿಸಿದೆ. ಈಗಾಗಲೇ ಈ ಘಟನೆಯಿಂದ ಗಾಯಗೊಂಡವರು ಅಜ್ಜರ ಕಾಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯರೇ ಇದ್ದ ಮನೆಗೆ ನುಗ್ಗಿ ಮಹಿಳೆಯರನ್ನು ಎಳೆದಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ರೀತಿಯ ವರ್ತನೆಯಿಂದಾಗಿ ಇಡೀ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ. ಆದ್ದರಿಂದ ಕೂಡಲೇ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ
ಎಸ್ಡಿಪಿಐ ನಿಯೋಗ ಭೇಟಿ
ಮನೆಯಲ್ಲಿ ಖಾಸಯಿಖಾನೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರು ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ, ಮಹಿಳೆಯರ ಬಟ್ಟೆ ಹರಿದು ದೌರ್ಜನ್ಯ ನಡೆಸಿದ ಘಟನೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿಯು ಖಂಡಿಸಿದೆ.
ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡವರು ಉಡುಪಿಯ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರನ್ನು ಎಸ್ಡಿಪಿಐ ಜಿಲ್ಲಾ ನಿಯೋಗ ಬೇಟಿ ಮಾಡಿ ಸಾಂತ್ವನ ಹೇಳಿದೆ. ಈ ಘಟನೆಯಲ್ಲಿ ತಪ್ಪಿತಸ್ಥ ಪೊಲೀಸರನ್ನು ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್ಡಿಪಿಐ ಉಡುಪಿ ಜಿಲ್ಲಾ ಅಧ್ಯಕ್ಷ ನಝೀರ್ ಅಹ್ಮದ್ ಒತ್ತಾಯಿಸಿದ್ದಾರೆ.