ಮೇಕೆದಾಟಿಗಾಗಿ ಕನ್ನಡಪರ ಸಂಘಟನೆಗಳಿಂದ ದೆಹಲಿ ಚಲೋ

Spread the love

ಮೇಕೆದಾಟಿಗಾಗಿ ಕನ್ನಡಪರ ಸಂಘಟನೆಗಳಿಂದ ದೆಹಲಿ ಚಲೋ

ಬೆಂಗಳೂರು: ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಕನ್ನಡಪರ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಿದ್ದು, 50 ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ದೆಹಲಿ ಚಲೋ ಹೋರಾಟ ಹಮ್ಮಿಕೊಂಡಿವೆ.

ನಗರದ ರೈಲ್ವೆ ನಿಲ್ದಾಣದ ಸಮೀಪದ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ದೆಹಲಿ ಅಭಿಯಾನ ಆರಂಭಿಸಿದರಲ್ಲದೆ, ಮೇಕೆದಾಟು ಕುಡಿಯುವ ನೀರಿನ ಅನುಷ್ಠಾನಕ್ಕಾಗಿ (ಫೆ.1 ರಂದು) ಬುಧವಾರ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಲು ವಿಳಂಬ ಮಾಡುತ್ತಿದೆ. ನಮ್ಮ ನೀರು – ನಮ್ಮ ಹಕ್ಕು”. ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುಯವುದರ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.

ಕನ್ನಡಪರ ಸಂಘಟನೆಗಳು “ಮೇಕೆದಾಟು ಹೋರಾಟ ಸಮಿತಿ” ರಚಿಸಿಕೊಂಡಿದ್ದು, ಯೋಜನೆಗೆ ಕೂಡಲೇ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲು ಮುಖ್ಯಸ್ಥರು ಮುಂದಾಗಿದ್ದೇವೆ ಎಂದು ಮೆಕೆದಾಟು ಹೋರಾಗಾರರ ಸಮಿತಿಯ ಅಧ್ಯಕ್ಷ ನಿಲೇಶ್‌ಗೌಡ ತಿಳಿಸಿದ್ದಾರೆ.

ಕೇಂದ್ರ ರಾಜ್ಯದ ಜನರ ಕೂಗಿಗೆ ಕಿವಿಕೊಡದೆ ಉದ್ದಟತನ ಪ್ರದರ್ಶಿಸುತ್ತಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರ ಸೇರಿ 6-7 ಜಿಲ್ಲೆಗಳ ಕುಡಿಯುವ ನೀರಿನ ಬವಣೆ ನೀಗಿಸಲು ಸಾಧ್ಯವಿದೆ. ಬೆಂಗಳೂರು ನಗರಕ್ಕೆ ಇದೀಗ 800 ದಶಲಕ್ಷ ಲೀಟರ್ ಕುಡಿಯುವ ನೀರಿನ ಅವಶ್ಯಕತೆಯಿದೆ. 2030 ರ ವೇಳೆಗೆ 1500 ದಶಲಕ್ಷಲೀಟರ್ ಗೆ ಬೇಡಿಕೆ ಹೆಚ್ಚಲಿದೆ. ಹೀಗಾಗಿ ದೂರದೃಷ್ಟಿಯಿಂದ ಮೇಕೆದಾಟು ಯೋಜನೆಯು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಬಿಜೆಪಿಯಿಂದ ರಾಜ್ಯದ 26 ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ತರಲು ಸಾಧ್ಯವಾಗುತ್ತಿಲ್ಲ. ಇದು ರಾಜ್ಯದ ನೀರಿನ ಹಕ್ಕು ರಕ್ಷಿಸಿಕೊಳ‍್ಳಲು ಸಾಧ್ಯವಾಗದ ಹೀನಾಯ ಸ್ಥಿತಿಗೆ ತಲುಪಿದ್ದೇವೆ. ಇದೀಗ ರಾಜ್ಯದಲ್ಲಿ ಚುನಾವಣೆ ಹತ್ತಿರ ಎದುರಾಗಿದ್ದು, ಬಿಜೆಪಿ ಸರ್ಕಾರ ಕೇಂದ್ರ ಮೇಲೆ ಒತ್ತಡ ತಂದು ಯೋಜನೆಯನ್ನು ಜಾರಿಗೆ ತರುವಲ್ಲಿ ಆಸಕ್ತಿ ತೋರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ವಿ.ನರಸಿಂಹಮೂರ್ತಿ ಮಾತನಾಡಿ, ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ರಾಜ್ಯದ ಬಿಜೆಪಿ ಮುಖಂಡರು ಯೋಜನೆ ಅನುಷ್ಠಾನದ ಬಗ್ಗೆ ಆಸಕ್ತಿ ತೋರಿಸುವಂತೆ ಮಾತನಾಡಿದರೆ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಬಿಜೆಪಿ ಪಕ್ಷದ ಇಬ್ಬಗೆಯ ನೀತಿ ತೋರಿಸುತ್ತಿದೆ ಎಂದು ಟೀಕಿಸಿದರು.

ರೈತ ಮತ್ತು ಕಾರ್ಮಿಕ ಹೋರಾಟಗಾರ ಬೆಟ್ಟಸ್ವಾಮಿಗೌಡ, ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ವಿ.ನರಸಿಂಹಮೂರ್ತಿ, ರೈತ ಮತ್ತು ಕಾರ್ಮಿಕ ಹೋರಾಟಗಾರ ಬೆಟ್ಟಸ್ವಾಮಿಗೌಡ, ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಸಿ.ಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭೀಮಾನಿ ಸೇನೆ ಅಧ್ಯಕ್ಷ ನಿಂಗರಾಜಗೌಡ, ಚಂದ್ರಮೌಳೇಶ್ವರ ಟ್ರಸ್ಟ್ ಅಧ್ಯಕ್ಷ ಗೋವಿಂದರಾಜು, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಎಸ್.ಶಿವಶಂಕರ್, ಕರ್ನಾಟಕ ಕಟ್ಟಡ ಕಾರ್ಮಿಕ ಸೇವಾ ಸಂಘದ ರಾಜ್ಯಾಧ್ಯಕ್ಷ ನಾಗಮಂಗಲ ಕುಮಾರ್, ಕರುನಾಡ ಕಾರ್ಮಿಕ ಸೇನೆ ರಾಜ್ಯಾಧ್ಯಕ್ಷ ಚೇತನ್ ಕನ್ನಡಿಗ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಅಧ್ಯಕ್ಷ ನಾರಾಯಣ್ ಸೇರಿದಂತೆ ಹಲವು ಮುಖಂಡರು ಇದ್ದರು.


Spread the love