ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕದಿದ್ದರೆ ಪ್ರತಿಭಟನೆ

Spread the love

ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕದಿದ್ದರೆ ಪ್ರತಿಭಟನೆ

ರಾಮನಗರ: ಮೇಕೆದಾಟು ಅಣೆಕಟ್ಟು ಯೋಜನೆಗೆ ಆ.15 ರಂದು ರಾಜ್ಯ ಸರ್ಕಾರ ಅಡಿಗಲ್ಲು ಹಾಕದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಸು.ಚಿ.ನೀಲೇಶ್‌ಗೌಡ ಎಚ್ಚರಿಕೆ ನೀಡಿದರು.

ನಗರ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಈ ಹಿಂದೆ ಬೈಕ್ ರ್‍ಯಾಲಿ, ಶವಯಾತ್ರೆ, ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಂತಾದ ಹೋರಾಟಗಳನ್ನು ಸಂಘಟನೆ ಹಮ್ಮಿಕೊಂಡು ಗಮನ ಸೆಳೆದರೂ ಯಾವ ಸರ್ಕಾರವೂ ಇತ್ತ ತಿರುಗಿ ನೋಡಲಿಲ್ಲ. ರಾಮನಗರ ಜಿಲ್ಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜಕೀಯ ಧುರೀಣರಿದ್ದರೂ ಸಹ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ನಾವು ಇನ್ನೆಷ್ಟು ಹೋರಾಟ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಒಂದು ತಿಂಗಳ ಕಾಲ ಗಡುವು ನೀಡಲಾಗಿದೆ. ಯೋಜನೆಗೆ ಆ.15 ರಂದು ರಾಜ್ಯ ಸರ್ಕಾರ ಅಡಿಗಲ್ಲು ಹಾಕದೆ ಈ ಭಾರಿಯೂ ಉದಾಸೀನ ತೋರಿದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸುತ್ತೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಿ.ಪಿಯೋಗೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸುವುದರ ಜತೆಗೆ, ಅಮರಣಾಂತ ಉಪವಾಸವನ್ನು ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೇಕೆದಾಟು ಹೋರಾಟ ಸಮಿತಿ ಹಮ್ಮಿಕೊಂಡಿರುವ ಪಾದಾಯಾತ್ರೆಗೆ ಸಂಘಟನೆ ಬೆಂಬಲ ನೀಡಲಿದೆ. ಕುಡಿಯುವ ನೀರಿನ ಯೋಜನೆಯಾದ ಮೇಲೆದಾಟು ಅಣಿಕಟ್ಟು ಆಗಬೇಕೆಂದು ನಮ್ಮ ಸಂಘಟನೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಅಲ್ಲದೆ ಹಲವಾರು ಕನ್ನಡಪರ ಹಾಗೂ ರೈತಪರ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯನ್ನು ವಿರೋಧಿಸಿ ಸರ್ವಪಕ್ಷ ಸಭೆ ಕರೆದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಒಳಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.

ತಮಿಳುನಾಡಿನ ಈ ಲಜ್ಜೆಗೆಟ್ಟ ನಡತೆ ನೆನ್ನೆ ಮೊನ್ನೆಯದಲ್ಲ ಹಲವಾರು ವರ್ಷಗಳಿಂದ ಯೋಜನೆಗೆ ಅಡ್ಡಗಾಲು ಹಾಕುವ ಹುನ್ನಾರ ಮಾಡುತ್ತಾ ಬಂದಿದೆ. ಆದರೆ ಇಷ್ಟು ವರ್ಷ ನಮ್ಮ ರಾಜ್ಯವನ್ನು ಆಳಿದ ಮೂರು ರಾಜಕೀಯ ಪಕ್ಷಗಳೂ ಕೂಡ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸದೆ ರಾಮನಗರ ಜಿಲ್ಲೆಯ ಜನತೆಯ ಹಿತವನ್ನು ಕಾಯುವಲ್ಲಿ ಮೂರು ಪಕ್ಷದ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ, ಕನಕಪುರದ ಬಂಡೆ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಹಾಗೂ ಎರಡು ಬಾರಿ ಸಚಿವರಾಗಿ ಆಧುನಿಕ ಭಗೀರಥ ಎನಿಸಿಕೊಂಡಿರುವ ಸಿ.ಪಿ ಯೋಗೇಶ್ವರ್ ರಂತಹ ಈ ಘಟಾನುಘಟಿಗಳೆಲ್ಲರೂ ರಾಮನಗರ ಜಿಲ್ಲೆಯವರಾಗಿರುವುದು ದುರಂತ. ಜಿಲ್ಲೆಯ ಜನತೆಗೆ ಇದು ನಾಚಿಕೆಗೆಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಕೆದಾಟು ವಿಷಯದಲ್ಲಿ ಇವರೆಲ್ಲರನ್ನು ಎಚ್ಚರಿಸಲು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಮುಂದಿನ ದಿನಗಳಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ವಕ್ತಾರ ರಾಜು ಲಗ್ಗೆರೆ, ಜಿಲ್ಲಾಧ್ಯಕ್ಷ ಎಸ್.ಆರ್.ಚಂದ್ರು, ಸಂಘಟನಾ ಕಾರ್ಯದರ್ಶಿ ರಮೇಶ್ ಯಲಿಯೂರು, ಕನಕಪುರ ಯುವ ಘಟಕದ ಅಧ್ಯಕ್ಷ ಸಾಗರ್, ಗೋವಿಂದರಾಜ ನಗರ ಘಟಕದ ಅಧ್ಯಕ್ಷ ವೀರಪ್ಪ ಮತ್ತಿತರರು ಉಪಸ್ಥಿತರಿದ್ದರು.


Spread the love