ಮೇಕೆದಾಟು ಯೋಜನೆ ಕಾರ್ಯಗತ ಖಚಿತ:ಸಿಎಂ ಬೊಮ್ಮಾಯಿ

Spread the love

ಮೇಕೆದಾಟು ಯೋಜನೆ ಕಾರ್ಯಗತ ಖಚಿತ:ಸಿಎಂ ಬೊಮ್ಮಾಯಿ

ಮೈಸೂರು: ತಮಿಳುನಾಡಿನಲ್ಲಿ ನೀರಿನ ರಾಜಕಾರಣ ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ಅದನ್ನು ಬದಿಗಿಟ್ಟು ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡಿಯೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಇದುವರೆಗೆ ಕಾವೇರಿ ನದಿ ನೀರು ಹಂಚಿಕೆಯ ವಿಚಾರ ಮುಂದಿಟ್ಟುಕೊಂಡು ಎಷ್ಟೋ ಪಕ್ಷಗಳು ರಾಜಕೀಯ ಮಾಡಿದ್ದಲ್ಲದೆ, ಅಧಿಕಾರಕ್ಕೆ ಬಂದು ಹೋಗಿವೆ. ಆದರೆ ತಮಿಳುನಾಡಿನವರು ಏನೇ ಹೇಳಿದರೂ ಮೇಕೆದಾಟು ಯೋಜನೆಯನ್ನು ಕೈ ಬಿಡದ ಕಾರ್ಯಗತ ಗೊಳಿಸುತ್ತೇವೆ ಎಂದು ತಿಳಿಸಿದರು.

ನಮ್ಮ ನೀರು ನಮ್ಮ ಹಕ್ಕು ಅದನ್ನು ಪಡೆದುಕೊಳ್ಳಲು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಸುಪ್ರೀಂ ಸಿಕೊರ್ಟ್ ನೀಡಿರುವ ತೀರ್ಪು ಕಾನೂನಾತ್ಮಕ ವಾಗಿ ನಮಗೆ ಇರುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಂಡು ಈ ವಿಚಾರದಲ್ಲಿ ಕಾನೂನು ತಜ್ಞರ ಜೊತೆಗೂ ಚರ್ಚೆ ನಡೆಸಿ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತೇವೆ.
ಕಾವೇರಿ ಕೊಳ್ಳದಲ್ಲಿ ಲಭ್ಯವಾಗುವ ಗರಿಷ್ಠ ಪ್ರಮಾಣದ ನೀರಿನ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಮೇಕೆದಾಟು ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ಪ್ರಮುಖರನ್ನು ಭೇಟಿ ಮಾಡಿ ಮುಂದಿನ ಕ್ರಮಗಳ ಕುರಿತಂತೆ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು.

ಈ ಸಂದರ್ಭ ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ಡಾ. ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ ಸಾಥ್, ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ರೇಣುಕಾಚಾರ್ಯ ಮತ್ತಿತರರಿದ್ದರು.


Spread the love