ಮೇಕೆದಾಟು ಯೋಜನೆ ಜಾರಿಗೆ ಬೃಹತ್ ಪಾದಯಾತ್ರೆ

Spread the love

ಮೇಕೆದಾಟು ಯೋಜನೆ ಜಾರಿಗೆ ಬೃಹತ್ ಪಾದಯಾತ್ರೆ

ರಾಮನಗರ: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿನ ದಾಹ ನೀಗಿಸಲು ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕರುನಾಡ ವಿಜಯಸೇನೆ ವತಿಯಿಂದ ಸೆ.23 ರಿಂದ 24ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ದೀಪಕ್ ಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.23ರಂದು ರಾಮನಗರದ ಐಜೂರು ವೃತ್ತದಲ್ಲಿ ಪಾದಯಾತ್ರೆ ಆರಂಭವಾಗಲಿದ್ದು, ಜಿಲ್ಲೆಯ ಪ್ರಮುಖ ಮೂರು ಮಠಗಳ ಮಠಾಧೀಶರು ಚಾಲನೆ ನೀಡುವರು. ಪಾದಯಾತ್ರೆಯಲ್ಲಿ ನೂರಾರು ಸಂಖ್ಯೆಯ ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುವ ಪಾದಯಾತ್ರೆಯು ಮೊದಲ ದಿನ ಬಿಡದಿ ಮೂಲಕ ಸಾಗಿ ಕೆಂಗೇರಿಯ ಮಠದಲ್ಲಿ ವಾಸ್ತವ್ಯ ಹೂಡಲಿದ್ದೇವೆ. ನಂತರ ಮರುದಿನ ಪಾದಯಾತ್ರೆಯ ಮುಂದುವರೆದು ವಿಧಾನಸೌಧನಕ್ಕೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೇಕೆದಾಟು ಮನವಿ ಸಲ್ಲಿಸಲಿದ್ದೇವೆ. ಕಾವೇರಿ ನೀರಿನ ವಿಚಾರದಲ್ಲಿ ಈಗಾಗಲೇ ವ್ಯಾಜ್ಯ ನಡೆಯುತ್ತಿದೆ. ಈಗ ಮೇಕೆದಾಟು ವಿಷಯವಾಗಿ ತಮಿಳುನಾಡು ತಗಾದೆ ತೆಗೆಯುತ್ತಿದ್ದು ಒಂದಲ್ಲಾ ಒಂದು ರೀತಿಯಲ್ಲಿ ದಬ್ಬಾಳಿಕೆ ಮಾಡುತ್ತಿದೆ. ಸುಧೀರ್ಘ ಹೋರಾಟ ನಡೆಸುವ ಪರಿಸ್ಥಿತಿ ಈಗ ಬಂದಿದೆ ಎಂದು ಹೇಳಿದರು.

ರಾಜ್ಯದ ರೈತರಿಗೆ ದೀಪಾವಳಿ ವೇಳೆಗೆ ಶುಭ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ನೀರಾವರಿ ಸಚಿವರಾಗಿದ್ದರು. ಹಾಗಾಗಿ ಅಣೆಕಟ್ಟು ನಿರ್ಮಾಣ ಸಂಬಂಧ ಅವರಿಗೆ ಮಾಹಿತಿ ಇದೆ. ಕಾನೂನು ತೊಡುಕಿನ ಬಗ್ಗೆ ಸಬೂಬು ಹೇಳದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಯೋಜನೆ ಜಾರಿಗೆ ಬರುವುದರಿಂದ ಬಯಲು ಸೀಮೆಯ ಜಿಲ್ಲೆಗಳಾದ ರಾಮನಗರ, ಬೆಂಗಳೂರು, ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಇತರೆ ಜಿಲ್ಲೆಯ ಜನತೆ ಕುಡಿಯುವ ನೀರಿನ ಮೂಲವಾಗುತ್ತದೆ. ಮೇಕೆದಾಟು ಯೋಜನೆ ಜಾರಿ ಸಂಬಂಧ ವಿರೋಧ ಪಕ್ಷಗಳು ರಾಜ್ಯ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೇಕೆದಾಟು ಅನುಷ್ಠಾನ ಸಂಬಂಧ ಮಾತನಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕ, ಕೇರಳ ತಮಿಳುನಾಡು ಹಾಗೂ ಪುದುಚೇರಿಗಳ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ಬಹಳ ಹಿಂದಿನಿಂದಲೂ ವಿವಾದ ನಡೆಯುತ್ತಲೇ ಇದೆ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡಿ ಮಧ್ಯೆ ಕಗ್ಗಂಟು ಬಿಗಡಾಯಿಸಿದ ಸ್ಥಿತಿಯಲ್ಲಿಯೇ ಇದೇ. ಕಾವೇರಿ ಜಲಜವಿವಾದ ನ್ಯಾಯ ಮಂಡಳಿ ಅಂತಿಮ ಆದೇಶದಂತೆ ನಿಗದಿತ ಪ್ರಮಾಣದ ನೀರನ್ನು ಇಷ್ಟು ವರ್ಷಗಳ ಕಾಲ ತಮಿಳುನಾಡಿಗೆ ಬಿಟ್ಟುವುದಕ್ಕೆ ನಮ್ಮಲ್ಲಿ ಪುರಾವೆಗಳಿವೆ. ಹಾಗಿದ್ದರೂ, ಸಹ ತಮಿಳುನಾಡು ಇಲ್ಲ ಸಲ್ಲದ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಲೇ ಇದೆ. ಉತ್ತಮವಾಗಿ ಮಳೆಯಾದಂತಹ ಸಂದರ್ಭಗಳಲ್ಲಿಯೂ ನೀರಿನ ಪ್ರಮಾಣದ ಬಗ್ಗೆಯೂ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿಸುವಂತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಅಣೆಕಟ್ಟು ಹೊರತುಪಡಿಸಿ ಬೇರೆಲ್ಲೂ ಜಲಾಶಯದ ಕೆಳಭಾಗದಲ್ಲಿ ತಮಿಳುನಾಡು ಸೇರುವವರೆಗೂ ಕಾವೇರಿ ನೀರಿನ ಶೇಖರಣಾ ವ್ಯವಸ್ಥೆ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಕಾವೇರಿಯು ತಮಿಳುನಾಡಿಗೆ ಸೇರುವ ಸುಮಾರು 186 ಕಿ.ಲೋ ಮೀಟರ್‌ವರೆಗೂ ಅನಿಯಂತ್ರಿತವಾಗಿ ನೀರು ಹರಿಯುತ್ತವೆ. ಅಣೆಕಟ್ಟು ನಿರ್ಮಾಣವಾದರೇ ಕರ್ನಾಟಕದ ಜನತೆಗೆ ನೈಸರ್ಗಿಕವಾಗಿ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದನೆ ಅಣೆಕಟ್ಟು ಬಳಕೆಗೆ ಅಗತ್ಯವಿರುವ ನೀರನ್ನು ಸರಬರಾಜು ಮಾಡಬಹುದು ಎಂದು ವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರುನಾಡ ವಿಜಯ ಸೇನೆಯ ಮಹೇಶ್, ಲೀಲಾ ರಾಮ್ ಪ್ರಸಾದ್‌ಗೌಡ, ವತ್ಸಲಾ, ವಾಸುದೇವ, ಪ್ರಸಾದ್, ಸುಧೀರ್ ಸೇರಿದಂತೆ ಮುಂತಾದವರು ಹಾಜರಿದ್ದರು.


Spread the love