ಮೇಕೆ ರಕ್ಷಿಸಲು ಹೋದ ಯುವಕ ಸಾವು

Spread the love

ಮೇಕೆ ರಕ್ಷಿಸಲು ಹೋದ ಯುವಕ ಸಾವು

ಕೆ.ಆರ್.ಪೇಟೆ: ಯುವಕನೊಬ್ಬ ತಾನು ಸಾಕಿದ್ದ ಮೇಕೆಯನ್ನು ನಾಯಿಯಿಂದ ರಕ್ಷಿಸಲು ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತೆಂಡೇಕೆರೆ ಗ್ರಾಮದ ನಿವಾಸಿ ಭೀಮೇಗೌಡರ ಮಗ ರಾಕೇಶ್ (17) ಮೃತಪಟ್ಟ ದುರ್ದೈವಿ. ಈತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಸಾಕಿದ್ದ ಮೇಕೆಯನ್ನು ನಾಯಿಯೊಂದು ಓಡಿಸಿಕೊಂಡು ಹೋದ ಪರಿಣಾಮ ಅದನ್ನು ರಕ್ಷಿಸಲು ಹೋಗಿದ್ದಾನೆ. ಈ ವೇಳೆ ಮೇಕೆಯು ನಾಯಿಯಿಂದ ರಕ್ಷಿಸಿಕೊಳ್ಳಲು ಕೆರೆಯ ನೀರಿನೊಳಗೆ ಹೋಗಿದೆ. ಮೇಕೆಯನ್ನು ರಕ್ಷಿಸಲು ರಾಕೇಶ್ ಸಹ ಕೆರೆಯೊಳಗೆ ಹೋಗಿದ್ದಾನೆ. ಮೇಕೆಯು ಈಜಿ ಮತ್ತೊಂದು ದಡ ಸೇರಿದರೆ ಕೆರೆಯಲ್ಲಿ ಹುಲ್ಲು ಮತ್ತು ಸತ್ತೆ ಹೆಚ್ಚಾಗಿದ್ದರಿಂದ ರಾಕೇಶ್ ಕಾಲಿಗೆ ಹುಲ್ಲು ಸುತ್ತಿಕೊಂಡು ಈಜಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ

ಕೂಡಲೇ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ಠಾಣೆಯ ಅಧಿಕಾರಿ ಶಿವಣ್ಣ ನೇತೃತ್ವದ ಅಗ್ನಿಶಾಮಕ ತಂಡ ಕಾರ್ಯಾಚರಣೆ ಆರಂಭಿಸಿ ಶವವನ್ನು ಹುಡುಕುವ ಪ್ರಯತ್ನ ಮಾಡಿ ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ಶವವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love