ಮೇಕೇರಿ ಆರೋಗ್ಯ ಕೇಂದ್ರಕ್ಕೀಗ ಅನಾರೋಗ್ಯ!

Spread the love

ಮೇಕೇರಿ ಆರೋಗ್ಯ ಕೇಂದ್ರಕ್ಕೀಗ ಅನಾರೋಗ್ಯ!

ಮಡಿಕೇರಿ: ಕೋವಿಡ್ ಸೋಂಕಿನ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಮಡಿಕೇರಿಗೆ ಸಮೀಪದ ಮೇಕೇರಿ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ ಬಂದಂತಿದೆ. ಕಾರಣ ಇದು ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿದೆ.

ಆರೋಗ್ಯ ಕೇಂದ್ರ ಅವ್ಯವಸ್ಥೆ ಬಗ್ಗೆ ಗ್ರಾ.ಪಂ ಪ್ರತಿನಿಧಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ತವ್ಯಲೋಪ ಎಸಗುತ್ತಿರುವ ಇಲ್ಲಿನ ಶ್ರುಶೂಷಕಿಯನ್ನು ತಕ್ಷಣ ವರ್ಗಾವಣೆ ಮಾಡದಿದ್ದಲ್ಲಿ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಅವರಿಗೆ ಮನವಿ ಸಲ್ಲಿಸಿದ ಗ್ರಾ.ಪಂ ಅಧ್ಯಕ್ಷ ಬಿ.ಬಿ.ದಿನೇಶ್ ಅವರ ನೇತೃತ್ವದ ನಿಯೋಗ ಆರೋಗ್ಯ ಕೇಂದ್ರದ ಅವ್ಯವಸ್ಥೆಗಳ ಬಗ್ಗೆ ವಿವರಿಸಿದ್ದಾರೆ.

ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶ್ರುಶೂಷಕಿಯರು ಆರೋಗ್ಯ ಕೇಂದ್ರದ ಪಕ್ಕದಲ್ಲೇ ವಾಸವಿರಬೇಕೆನ್ನುವ ನಿಯಮವಿದೆ. ಆದರೆ ಕಳೆದ ಎರಡು ವರ್ಷಗಳಿಂದ ಮೇಕೇರಿ ಆರೋಗ್ಯ ಕೇಂದ್ರದ ಶ್ರುಶೂಷಕಿ ಇಲ್ಲಿ ವಾಸವಾಗಿಲ್ಲ. ಸರ್ಕಾರ ನೀಡಿರುವ ಮನೆಯಲ್ಲಿ ಶ್ರುಶೂಷಕಿಯ ಸಹೋದರ ವಾಸವಿದ್ದು, ಆರೋಗ್ಯ ಕೇಂದ್ರವನ್ನು ಬಾರ್ ನಂತೆ ಪರಿವರ್ತಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅನಾರೋಗ್ಯದಿಂದ ಗ್ರಾಮಸ್ಥರು ಆರೋಗ್ಯ ಕೇಂದ್ರಕ್ಕೆ ತೆರಳಿದರೆ ಶ್ರುಶೂಷಕಿ ಲಭ್ಯವಿರುವುದಿಲ್ಲ. ಮನೆ ಮನೆಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸುತ್ತಿಲ್ಲ. ಗರ್ಭಿಣಿ ಸ್ತ್ರೀಯರಿಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಶ್ರುಶೂಷಕಿಯ ಬೇಜವಾಬ್ದಾರಿತನದಿಂದ ಅವರ ಕೆಲಸವನ್ನು ಮೇಕೇರಿಯ ಆಶಾ ಕಾರ್ಯಕರ್ತೆ ಹಾಗೂ ಪಂಚಾಯಿತಿ ಸದಸ್ಯರು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೂರಿದ್ದಾರೆ.

ಮೇಕೇರಿ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗದ ಶ್ರುಶೂಷಕಿ ಕರ್ತವ್ಯ ಲೋಪವೆಸಗಿದ್ದಾರೆ. ಈ ಬಗ್ಗೆ ಪಂಚಾಯಿತಿ ಸದಸ್ಯರು ಪ್ರಶ್ನಿಸಿದಾಗ ನನಗೆ ಮಾಹಿತಿ ಇಲ್ಲವೆಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಪ್ರಮುಖರು ಆರೋಪಿಸಿದ್ದಾರೆ.

ಆರೋಗ್ಯ ಕೇಂದ್ರದ ಸುತ್ತ ಅಶುಚಿತ್ವದ ವಾತಾವರಣವಿದ್ದು, ಗಿಡಗಂಟಿಗಳು ಬೆಳೆದು ಅನಾರೋಗ್ಯ ಕೇಂದ್ರದಂತೆ ಆತಂಕವನ್ನು ಮೂಡಿಸುತ್ತಿದೆ. ಇಲ್ಲಿನ ಎಲ್ಲ್ಲ ಅವ್ಯವಸ್ಥೆಗಳಿಗೆ ಶ್ರುಶೂಷಕಿಯೇ ನೇರ ಹೊಣೆಯಾಗಿದ್ದು, ಇವರನ್ನು ತಕ್ಷಣ ವರ್ಗಾವಣೆಗೊಳಿಸಬೇಕು ಮತ್ತು ಗ್ರಾಮಸ್ಥರಿಗೆ ಸ್ಪಂದಿಸುವ ಶ್ರುಶೂಷಕಿಯನ್ನು ನೇಮಕ ಮಾಡಬೇಕೆಂದು ಗ್ರಾ.ಪಂ ಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

ಮುಂದಿನ ಒಂದು ವಾರದೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಒಗ್ಗೂಡಿ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಅಧ್ಯಕ್ಷ ಬಿ.ಬಿ.ದಿನೇಶ್ ಎಚ್ಚರಿಕೆ ನೀಡಿದ್ದಾರೆ.


Spread the love